ಉಪ್ಪಿನಂಗಡಿ (ದಕ್ಷಿಣ ಕನ್ನಡ): ಕುಸಿದು ಬಿದ್ದು ಮೃತಪಟ್ಟ ಹೋಟೆಲ್ ಕಾರ್ಮಿಕರೊಬ್ಬರಿಗೆ ಜ್ವರವಿತ್ತು ಎಂದು ವದಂತಿ ಹಬ್ಬಿಸಿದ ಪರಿಣಾಮ ಮೃತದೇಹ ಮುಟ್ಟಲು ಯಾರೊಬ್ಬರೂ ಮುಂದಾಗದ ಘಟನೆ ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿಯಲ್ಲಿ ನಡೆದಿದೆ.
ಉಡುಪಿ ಮೂಲದ 56 ವರ್ಷದ ವ್ಯಕ್ತಿ, ಉಪ್ಪಿನಂಗಡಿಯ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಲಾಕ್ಡೌನ್ ಪರಿಣಾಮ ಅವರು ನೆಕ್ಕಿಲಾಡಿಯ ಪರಿಚಯಸ್ಥರ ಮನೆಯಲ್ಲಿ ಉಳಿದುಕೊಂಡಿದ್ದರು.
ಬುಧವಾರ ಮಧ್ಯಾಹ್ನದ ವೇಳೆ ಮನೆಯಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದರು. ಆತನಿಗೆ ಜ್ವರವಿತ್ತು ಎಂದು ಸುತ್ತಮುತ್ತಲಿನವರು ವದಂತಿ ಹಬ್ಬಿಸಿದ್ದರು. ಈ ವಿಷಯ ಉಪ್ಪಿನಂಗಡಿ ಪೊಲೀಸ್ ಠಾಣೆಗೂ ತಲುಪಿತು. ವಿಷಯ ತಿಳಿದು ಮೃತನ ಪುತ್ರನೂ ಸಂಜೆ ವೇಳೆಗೆ ನೆಕ್ಕಿಲಾಡಿಗೆ ಆಗಮಿಸಿದರು.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಶವಸಂಸ್ಕಾರಕ್ಕೆ ಯಾರೊಬ್ಬರು ಮುಂದಾಗಲಿಲ್ಲ. ಇತ್ತ ಶವವನ್ನು ಊರಿಗೆ ಸಾಗಿಸಲೂ ಆಗದೆ ಮೃತನ ಪರಿಚಯಸ್ಥರು ಅಸಹಾಯಕರಾಗಿ ಪೊಲೀಸ್ ಠಾಣೆ ಬಾಗಿಲಲ್ಲಿ ಕಾಯುವ ಸ್ಥಿತಿ ಎದುರಾಯಿತು. ಅಲ್ಲದೆ, ಕಂದಾಯ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಡಿದ ದೂರವಾಣಿ ಕರೆಗಳು ವಿಫಲವಾದವು.
ಮೃತನ ಪುತ್ರನ ಸಂಕಷ್ಟ ಅರಿತ ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿ ಈರಯ್ಯ ಅವರು, ಖಾಸಗಿ ಆ್ಯಂಬುಲೆನ್ಸ್ ಚಾಲಕರೊಬ್ಬರ ಮನವೊಲಿಸಿ, ಪೊಲೀಸರಿಗೆ ನೀಡಲಾದ ಪಿಪಿಇ ಉಡುಪನ್ನು ಆತನಿಗೆ ತೊಡಿಸಿ ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಮೃತನ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಫಲಿತಾಂಶ ಬಂದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.