ಪುತ್ತೂರು (ದಕ್ಷಿಣ ಕನ್ನಡ):ರಾಜ್ಯಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಕರೆಸಿ ದೋಸೆ ಮಾಡಿಸಿದರೆ ಜನರು ಮತ ಹಾಕಲ್ಲ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.
ಪುತ್ತೂರಿನಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ 1960ರ ಹಳೆ ಟೇಪ್ ರೆಕಾರ್ಡಿಂಗ್ ಇದ್ದಹಾಗೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಈ ಕಾನೂನು ತೆಗೆದುಹಾಕುತ್ತಿವಿ, ಆ ಕಾನೂನು ಮಾಡಲು ಬಿಡುವುದಿಲ್ಲ ಎಂದು ಆ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಪಕ್ಷವನ್ನು ರಿವರ್ಸ್ ಗೇರ್ ಎಂದು ಹೇಳಿದ್ದಾರೆ. ಕಾಂಗ್ರೆಸ್ ರಿವರ್ಸ್ ಗೇರ್ ಹಾಕಿ ಓಡುತ್ತಿದೆ. ಆದರೆ ಬಿಜೆಪಿ ಡಬಲ್ ಎಂಜಿನ್ ಮೂಲಕ ಮುಂದೆ ಸಾಗುತ್ತಿದೆ. ಇದೇ ಕಾಂಗ್ರೆಸ್ ಮತ್ತು ಬಿಜೆಪಿಗೆ ಇರುವ ವ್ಯತ್ಯಾಸವಾಗಿದೆ ಎಂದು ಹೇಳಿದರು.
ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರ ಗೆಲುವು ನಿಶ್ಚಿತ. ಸಂಘಟನೆಯಲ್ಲಿ ಕೆಲಸ ಮಾಡಿದ ಆಧಾರದಲ್ಲಿ ಪಕ್ಷ ಈ ಬಾರಿ ಆಶಾ ತಿಮ್ಮಪ್ಪ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಬಿಜೆಪಿಯಲ್ಲಿ ಕಾಂಗ್ರೆಸ್ ಪಕ್ಷದಂತೆ ಕೇವಲ ಇಬ್ಬರು ಕುಳಿತು ಅಭ್ಯರ್ಥಿಯನ್ನು ಆಯ್ಕೆ ಮಾಡುವ ವ್ಯವಸ್ಥೆಯಿಲ್ಲ. ತಳಮಟ್ಟದ ಶಕ್ತಿ ಕೇಂದ್ರ, ಜಿಲ್ಲಾ ಕೇಂದ್ರ, ರಾಜ್ಯ ಚುನಾವಣಾ ಸಮಿತಿ, ಕೇಂದ್ರ ಚುನಾವಣಾ ಸಮಿತಿ, ಪಾರ್ಲಿಮೆಂಟರಿ ಸಮಿತಿ ಚರ್ಚೆ ನಡೆಸಿದ ಬಳಿಕ ಪ್ರಧಾನಿ ಮೋದಿ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತಗೊಳಿಸುತ್ತಾರೆ ಎಂದರು.