ಶ್ರೀ ಮಹಾಲಕ್ಷ್ಮೀ ಬಿಂಬದ ಮೇಲೆ ಸೂರ್ಯರಶ್ಮಿ ಸ್ಪರ್ಶ.. ಪುತ್ತೂರು(ದಕ್ಷಿಣ ಕನ್ನಡ): ಪ್ರತಿ ವರ್ಷ ಮೀನ ಸಂಕ್ರಮಣದಂದು ವಿಶೇಷವಾಗಿ ಮುಂಜಾನೆಯ ವೇಳೆ ಸೂರ್ಯನ ರಶ್ಮಿ ದೇವಿಯ ಬಿಂಬಕ್ಕೆ ಸ್ಪರ್ಶಿಸುತ್ತಿರುವ ರಾಜ್ಯದ ಏಕೈಕ ದೇವಸ್ಥಾನ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಾಲಯ. ಇದೇ ರೀತಿ ಇಂದು ಕೂಡ (ಮಾ.14ರ) ಮಹಾಲಕ್ಷ್ಮೀ ದೇವಿಯ ಬಿಂಬಕ್ಕೆ ಮೀನ ಸಂಕ್ರಮಣದಂದು ಮುಂಜಾನೆ ಸೂರ್ಯ ರಶ್ಮಿಯ ಸ್ಪರ್ಶವಾಯಿತು.
ಪ್ರಾತಃಕಾಲ ಶ್ರೀ ಮಹಾಲಿಂಗೇಶ್ವರ ಭಜಕ ವೃಂದದವರಿಂದ ಭಜನೆ, ಶ್ರೀಕೃಷ್ಣ ಉಪಾಧ್ಯಾಯರಿಂದ ವೇದ ಮಂತ್ರ ಘೋಷ ನೆರವೇರಿತು. ಬೆಳಗ್ಗೆ 7 ಗಂಟೆಯಿಂದ 7.30ರ ಸಮಯದಲ್ಲಿ ಕ್ಷೇತ್ರದ ಮೂರು ಬಾಗಿಲುಗಳನ್ನು ದಾಟಿ ಸೂರ್ಯನ ಕಿರಣಗಳು ಗರ್ಭಗುಡಿಯಲ್ಲಿ ನೆಲೆಯಾಗಿರುವ ಮಹಾಲಕ್ಷ್ಮೀಯ ಬಿಂಬದ ಮೇಲೆ ಸ್ಪರ್ಶಿಸಿದೆ. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಎನ್.ಐತ್ತಪ್ಪ ಸಪಲ್ಯರು ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ವೈದಿಕರಿಂದ ವೇದ, ಘೋಷ ಮಂತ್ರ ಮೊಳಗಿತು. ನೂರಾರು ಮಂದಿ ಭಕ್ತಾದಿಗಳು ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಂಡು ಪುನೀತರಾದರು.
ವರ್ಷದ ಕೊನೆಯ ಮಾಸವಾಗಿರುವ ಮೀನ ಸಂಕ್ರಮಣದಂದು ಸೂರ್ಯ ತನ್ನ ಪಥ ಬದಲಿಸುವ ಮಹತ್ವದ ಘಟ್ಟ. ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ದಿನ ಸಂಜೆಯ ವೇಳೆಗೆ ಸೂರ್ಯನ ರಶ್ಮಿಯು ಬಿಂಬವನ್ನು ಸ್ಪರ್ಶಿಸುತ್ತಿದೆ.
ಕಳೆದ 19 ವರ್ಷಗಳಿಂದ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ಕ್ಷೇತ್ರಕ್ಕೆ ಬರುತ್ತಿದ್ದೇನೆ. ಮೀನ ಸಂಕ್ರಮಣ ವಿಶೇಷ ದಿನ. ಮಂಗಳವಾರ ಲಕ್ಷ್ಮೀದೇವಿಯನ್ನು ಸೂರ್ಯರಶ್ಮಿ ಸ್ಪರ್ಶಿಸುವ ದಿನವಾಗಿದೆ. ಈ ಪುಣ್ಯ ಸಮಯದಲ್ಲಿ ದೇವರ ಅನುಗ್ರಹ ಪಡೆದರೆ ಭಕ್ತರ ಇಷ್ಟಾರ್ಥ ನೆರವೇರುತ್ತದೆ. ಹಾಗೆಯೇ ಭಕ್ತಾದಿಗಳ ಒಗ್ಗೂಡುವಿಕೆಯಿಂದ ಈ ದೇವಸ್ಥಾನದ ಎಲ್ಲಾ ಕೆಲಸ ಕಾರ್ಯಗಳು ನಡೆದು ಆದಷ್ಟು ಬೇಗ ಭವ್ಯ ಮಹಾಲಕ್ಷ್ಮೀ ದೇವಸ್ಥಾನ ನಿರ್ಮಾಣವಾಗಲಿ ಎಂಬುದು ಭಕ್ತರ ಹಾರೈಕೆಯಾಗಿದೆ ಎನ್ನುತ್ತಾರೆ ಭಕ್ತೆ ವನಿತಾ.
ಶ್ರೀ ಮಹಾಲಕ್ಷ್ಮೀ ಬಿಂಬದ ಮೇಲೆ ಸೂರ್ಯರಶ್ಮಿ ಸ್ಪರ್ಶ ನೆಮ್ಮದಿಯ ಕ್ಷೇತ್ರ:ಚಿಕ್ಕ ಪ್ರಾಯದಿಂದ ಈ ಕ್ಷೇತ್ರಕ್ಕೆ ಬರುತ್ತಿದ್ದೇವೆ. ದೇವರನ್ನು ನೋಡಿದಾಗ ಪುಳಕ ಉಂಟಾಗುತ್ತದೆ. ಇಂದು ಮೀನ ಸಂಕ್ರಮಣದ ಪ್ರಯುಕ್ತ ಸೂರ್ಯ ರಶ್ಮಿ ಶ್ರೀ ದೇವಿ ಬಿಂಬದ ಮೇಲೆ ಬೀಳುವುದನ್ನು ನೋಡಿದಾಗ ತುಂಬಾ ಖುಷಿಯಾಗುತ್ತದೆ. ನನಗೆ ಮಾನಸಿಕವಾಗಿ ವೇದನೆ ಉಂಟಾದಾಗ ಈ ಕ್ಷೇತ್ರಕ್ಕೆ ಬಂದಾಗ ಮನಸ್ಸಿಗೆ ತುಂಬಾ ನೆಮ್ಮದಿಯಾಗುತ್ತದೆ. ನನ್ನ ಹಾಗೆ ಹಲವಾರು ಭಕ್ತರು ಬರುತ್ತಿದ್ದಾರೆ. ಇಲ್ಲಿ ಭಜನೆ ಮಾಡಿದಾಗ ಹೋದಾಗ ಧನಾತ್ಮಕ ಶಕ್ತಿ ಉಂಟಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತೆ ಸುಂಗಳ ಶೆಣೈ ಹೇಳಿದರು.
ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮಿ ಸನ್ನಿಧಿಗೆ ಮೀನ ಸಂಕ್ರಮಣದ ಶುಭ ದಿನ ಸೂರ್ಯರರ್ಶಿ ಸ್ಪರ್ಶ ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಸಂದರ್ಭದಲ್ಲಿ ಭಜನೆ, ವೇದ ಘೋಷಣೆಗಳೊಂದಿಗೆ ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ಅವರ ನೇತೃತ್ವದಲ್ಲಿ ಶ್ರೀ ದೇವಿಗೆ ಆರತಿ ಬೆಳಗಿ ಭಕ್ತಾದಿಗಳಿಗೆ ಪ್ರಸಾದ ನೀಡಲಾಗುತ್ತದೆ. ಹಾಗೆಯೇ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಾ ಬಂದಿದೆ. ಸುಮಾರು 7 ಕೋಟಿ ರೂ. ವೆಚ್ಚದ ಭವ್ಯ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ನಿರ್ಮಾಣವಾಗಲಿದೆ. ವಿಶೇಷವಾಗಿ ಕಪ್ಪು ಶಿಲೆಕಲ್ಲಿನಿಂದ ಸಂಪೂರ್ಣ ದೇವಸ್ಥಾನವನ್ನು ನಿರ್ಮಿಸಲಾಗುತ್ತದೆ. ಜೀರ್ಣೋದ್ಧಾರ ಕಾರ್ಯ ಭಕ್ತಾದಿಗಳ ಸಹಕಾರದೊಂದಿಗೆ ಭರದಿಂದ ಸಾಗುತ್ತಿದೆ. ಬೆಲೂರು, ಹಳೆಬೀಡಿನಲ್ಲಿ ನಾವು ನೋಡುತ್ತಿರುವ ಕೆತ್ತನೆಗಳನ್ನು ಇಲ್ಲಿ ನಾವು ಕಾಣಬಹುದು. ದೈವಜ್ಞರು ಹೇಳಿದ ಪ್ರಕಾರದ ದೇವಸ್ಥಾನದ ನಿರ್ಮಾಣವಾಗುತ್ತಿದ್ದು, ಮುಂದಿನ ಒಂದು ವರ್ಷದೊಳಗೆ ದೇವಸ್ಥಾನ ನಿರ್ಮಾಣವಾಗಿ ಶ್ರೀ ಮಹಾಲಕ್ಷ್ಮೀ ಶಿಲಾಮಯ ಗರ್ಭಗುಡಿಯಲ್ಲಿ ಕುಳಿತುಕೊಳ್ಳಲಿದ್ದಾಳೆ. ಪುನಃ ಮೀನ ಸಂಕ್ರಮಣದಂದು ಸೂರ್ಯರಶ್ಮಿ ಸ್ಪರ್ಶ ಆಗಲಿದೆ ಎಂದು ಪುತ್ತೂರು ನಗರಸಭೆ ಸದಸ್ಯ ಪಿ.ಜಿ ಜಗನ್ನಿವಾಸ ರಾವ್ ಮಾಹಿತಿ ನೀಡಿದರು.
ಇದನ್ನೂ ಓದಿ: ಪುತ್ತೂರು : ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮಿಗೆ ಸೂರ್ಯರಶ್ಮಿಯ ಸ್ಪರ್ಶ- ವಿಶೇಷ ಪೂಜೆ..