ಮಂಗಳೂರು :ಎಸ್ಎಸ್ಎಲ್ಸಿ ಪರೀಕ್ಷೆ ಅಧ್ಯಯನವನ್ನು ವಿದ್ಯಾರ್ಥಿಗಳು ಟೆನ್ಷನ್ ಮಾಡಿಕೊಂಡು ಕಲಿಯುವುದನ್ನು ನೋಡಿದ್ದೇವೆ. ಆದರೆ, ಮಂಗಳೂರಿನ ವಿದ್ಯಾರ್ಥಿನಿ ಎಸ್ಎಸ್ಎಲ್ಸಿಯ 6 ಪಠ್ಯವನ್ನು ಅಧ್ಯಯನಕ್ಕಾಗಿ 8 ಪುಟದ ಚಿತ್ರದಲ್ಲಿ ಬರೆದು ದಾಖಲೆ ಮಾಡಿ ಇಂಡಿಯಾ ಬುಕ್ ಅಫ್ ರೆಕಾರ್ಡ್ನಲ್ಲಿ ತನ್ನ ಹೆಸರು ಅಚ್ಚೊತ್ತಿದ್ದಾಳೆ.
ಎಸ್ಎಸ್ಎಲ್ಸಿ ಪೂರ್ತಿ ಪಠ್ಯವನ್ನು ಅಭ್ಯಸಿಸಲು ವಿದ್ಯಾರ್ಥಿಗಳು ಭಾರಿ ಸಂಕಷ್ಟ ಪಡುತ್ತಾರೆ. ಆದರೆ, ಮಂಗಳೂರಿನಲ್ಲಿ ರೆಗ್ಯುಲರ್ ಶಾಲೆಗೆ ಹೋಗದೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ಮಂಗಳೂರಿನ ಆದಿ ಸ್ವರೂಪ ತನ್ನ ವಿಶೇಷ ಕಾರ್ಯದಿಂದ ಇಂಡಿಯಾ ಬುಕ್ ಅಫ್ ರೆಕಾರ್ಡ್ ಸೇರಿದ್ದಾಳೆ. ಆದಿ ಸ್ವರೂಪ 10ನೇ ತರಗತಿಯ 6 ವಿಷಯದಲ್ಲಿ 10 ಪುಸ್ತಕಗಳನ್ನು 8 ಪೇಜ್ನಲ್ಲಿ ಬರೆದಿದ್ದಾಳೆ.
8 ಪೇಜ್ನಲ್ಲಿ SSLC ಪಠ್ಯಗಳ ಚಿತ್ರಿಸಿ ಇಂಡಿಯಾ ಬುಕ್ ಅಫ್ ರೆಕಾರ್ಡ್ನಲ್ಲಿ ಸೇರಿದ ಕರಾವಳಿ ಕುವರಿ ಒಂದೊಂದು ಪಠ್ಯವನ್ನು ಶಿಕ್ಷಣ ವ್ಯವಸ್ಥೆಯ ಸಮಸ್ಯೆಯನ್ನು ಬಿಂಬಿಸುವ ಒಂದೊಂದು ಚಿತ್ರದ ಮೂಲಕ ಬರೆಯಲಾಗಿದ್ದು, ಇದರೊಳಗೆ ಚಿಕ್ಕ ಚಿಕ್ಕ ಚಿತ್ರದ ಮೂಲಕ ನೋಟ್ಸ್ ಮಾಡಿಕೊಂಡಿರುವುದು ವಿಶೇಷ. ಎಸ್ಎಸ್ಎಲ್ಸಿ ಪೂರ್ತಿ ಪಠ್ಯವನ್ನು 93 ಸಾವಿರಕ್ಕೂ ಹೆಚ್ಚು ಚಿತ್ರದಲ್ಲಿ ಈ ಬಾಲಕಿ ಬರೆದಿದ್ದಾಳೆ. ಇದರಿಂದ ಎಸ್ಎಸ್ಎಲ್ಸಿ ಪೂರ್ಣ ಪಾಠವನ್ನು ಆಕೆಗೆ 20 ಗಂಟೆಯಲ್ಲಿ ಕಲಿಕೆ ಮಾಡಲು ಸಾಧ್ಯವಾಗಲಿದೆ.
ಆದಿ ಸ್ವರೂಪಳ ತಂದೆ ನಡೆಸುತ್ತಿರುವ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಕಲಿಯುತ್ತಿರುವ ಈಕೆ ನೇರ ಶಿಕ್ಷಣದಲ್ಲಿ ಭಾಗಿಯಾಗದೆ ಸ್ವ-ಕಲಿಕೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದಾಳೆ. ಇದಕ್ಕಾಗಿ ಆಕೆ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಸಿದ್ದಪಡಿಸಲಾದ ನೆನಪಿನ 10 ತಂತ್ರಗಳಲ್ಲಿ ವಿಸ್ಯುವಲ್ ಮೆಮೊರಿ ಆರ್ಟ್ನಲ್ಲಿ ಈ ದಾಖಲೆ ಮಾಡಿದ್ದಾಳೆ. ಪಠ್ಯದ ವಿಚಾರವನ್ನು ಸಣ್ಣ ಸಣ್ಣ ಚಿತ್ರಗಳಲ್ಲಿ ಬಿಡಿಸಿ ನೆನಪಿನಲ್ಲಿ ಉಳಿಯುವಂತೆ ಮಾಡಿದ ಸಾಧನೆಯಿಂದಾಗಿ ಇಂಡಿಯಾ ಬುಕ್ ಅಫ್ ರೆಕಾರ್ಡ್ ಈಕೆಯ ಸಾಧನೆ ಗುರುತಿಸಿದೆ.
ಆದಿ ಸ್ವರೂಪಗೆ ಇಂಡಿಯಾ ಬುಕ್ ಅಫ್ ರೆಕಾರ್ಡ್ನಲ್ಲಿ incredible visual memory artist ಎಂಬ ವಿಭಾಗದಲ್ಲಿ ದಾಖಲಾಗಿದೆ. ಇದು ಸೇರಿದಂತೆ ಎಸ್ಎಸ್ಎಲ್ಸಿ ಪಠ್ಯ ಕಲಿಕೆಯಲ್ಲಿ ಬೇರೆ ಬೇರೆ ವಿಧಾನದಲ್ಲಿ 10 ಇಂಡಿಯಾ ಬುಕ್ ಅಫ್ ರೆಕಾರ್ಡ್ ಸಾಧನೆ ಮಾಡುವ ಗುರಿಯನ್ನು ಆದಿ ಸ್ವರೂಪ ಹೊಂದಿದ್ದಾರೆ. ಎಸ್ಎಸ್ಎಲ್ಸಿ ಕಲಿಕೆಯನ್ನು ಕಷ್ಟಪಟ್ಟು ಮಾಡುವ ವಿದ್ಯಾರ್ಥಿಗಳಿಗೆ ಆದಿ ಸ್ವರೂಪ ಮಾದರಿಯಾಗಿದ್ದಾರೆ.