ಪುತ್ತೂರು (ದಕ್ಷಿಣಕನ್ನಡ) : ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಬಿಲ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಳಿಕೆಯಾಗುವ ಲಕ್ಷಣವೇ ಗೋಚರಿಸುತ್ತಿಲ್ಲ. ಇದರಿಂದಾಗಿ ಇತರ ಖರ್ಚುಗಳ ಜೊತೆಗೆ ವಿದ್ಯುತ್ತಿಗೂ ಹೆಚ್ಚಿನ ಹಣವನ್ನು ವ್ಯಯಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ವಿದ್ಯುಚ್ಛಕ್ತಿಗೆ ಪರ್ಯಾಯವಾಗಿ ಸೋಲಾರ್ ಸೇರಿದಂತೆ ಪರ್ಯಾಯ ವ್ಯವಸ್ಥೆಗಳನ್ನು ಬಳಸಿಕೊಳ್ಳಬೇಕಾದ ಅನಿವಾರ್ಯತೆಯೂ ಎದುರಾಗಿದೆ.
ಸೋಲಾರ್ ಶಕ್ತಿಯನ್ನು ಬಳಸಿ ನೀರು ಸರಬರಾಜು: ಗ್ರಾಮದ ಜನತೆಗೆ ನಿತ್ಯ ನೀರು ಸರಬರಾಜು ಮಾಡಲು ತಿಂಗಳಿಗೆ ಸಾವಿರಾರು ರೂಪಾಯಿಯನ್ನು ವಿದ್ಯುತ್ ಗಾಗಿ ಖರ್ಚು ಮಾಡುತ್ತಿದ್ದ ದಕ್ಷಿಣಕನ್ನಡ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದು ಇಂದು ಯಾವುದೇ ಖರ್ಚಿಲ್ಲದೆ ಗ್ರಾಮದ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮಪಂಚಾಯತ್ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಹಾಗೂ ರಾಜ್ಯದಲ್ಲೂ ಅಪರೂಪದ ಪ್ರಯತ್ನವನ್ನು ಮಾಡುವ ಮೂಲಕ ಗುರುತಿಸಿಕೊಂಡಿದೆ. ಪಂಚಾಯತ್ ನ ಮೂರನೇ ವಾರ್ಡನ ಪ್ರತೀ ಮನೆಗಳಿಗೆ ನೀರು ಸಂಪರ್ಕ ಕಲ್ಪಿಸುವ ಉದ್ಧೇಶದಿಂದ ಕೊಲ್ಯ ಎನ್ನುವಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ 5 HP ಸಾಮರ್ಥ್ಯದ ನೀರಿನ ಪಂಪ್ ಅಳವಡಿಸಲಾಗಿದೆ. ಈ ಪಂಪ್ ಸೋಲಾರ್ ನಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ.
ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತ್: ಈ ವಾರ್ಡ್ ನಲ್ಲಿರುವ ಒಟ್ಟು 88 ಮನೆಗಳಿಗೆ ಪಂಚಾಯತ್ ನಿತ್ಯ ನೀರು ಪೂರೈಸುತ್ತದೆ. ದಿನವೂ ವಿದ್ಯುಚ್ಛಕ್ತಿ ಬಳಸಿಕೊಂಡು ಪಂಚಾಯತ್ ಎಲ್ಲ ಮನೆಗಳಿಗೆ ನೀರನ್ನು ಪೂರೈಕೆ ಮಾಡುತ್ತಿತ್ತು. ಈ ವ್ಯವಸ್ಥೆಗಾಗಿ ಪಂಚಾಯತ್ ಕೇವಲ ಒಂದು ವಾರ್ಡ್ ಗೆ ಪ್ರತೀ ತಿಂಗಳೂ ಸುಮಾರು 23 ಸಾವಿರ ರೂಪಾಯಿಗಳ ವಿದ್ಯುತ್ ಬಿಲ್ ಕಟ್ಟುತ್ತಿತ್ತು. ವಿದ್ಯುತ್ ಗೆ ಪರ್ಯಾಯವಾಗಿ ಸೋಲಾರ್ ಶಕ್ತಿಯನ್ನು ಬಳಸುವಂತೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಕಳೆದ ಎರಡು ವರ್ಷದ ಹಿಂದೆ ಕೊಲ್ಯ ವಾರ್ಡ್ ನ ನೀರಿನ ಪಂಪ್ ಅನ್ನು ಸೋಲಾರ್ ಶಕ್ತಿ ಬಳಕೆ ಮಾಡಿ ನೀರು ಸರಬರಾಜು ಮಾಡಲು ನಿರ್ಧರಿಸಲಾಗಿತ್ತು.
3.90 ಲಕ್ಷ ವೆಚ್ಚದಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ :ಈ ಸಂಬಂಧ ಕಾರ್ಯಪ್ರವೃತ್ತವಾದ ಪಂಚಾಯತ್ ಸುಮಾರು 3.90 ಲಕ್ಷ ರೂಪಾಯಿ ವೆಚ್ಚದಲ್ಲಿ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಿ, ಈ ಮೂಲಕ ನೀರಿನ ಸರಬರಾಜು ಮಾಡಲು ಆರಂಭಿಸಿದೆ. ಬೇಸಿಗೆ ಸೇರಿದಂತೆ ಮಳೆಗಾಲದಲ್ಲಿ ಎರಡು ಗಂಟೆ ಬಿಸಿಲು ಬಿದ್ದರೂ ಪಂಪ್ನ್ನು ಚಾಲನೆ ಮಾಡುವ ಮೂಲಕ ಮಾಡಿ ನೀರು ಸರಬರಾಜು ಮಾಡಲಾಗುತ್ತದೆ. ಇದರಿಂದಾಗಿ ತಿಂಗಳಿಗೆ 23 ಸಾವಿರಕ್ಕೂ ಮಿಕ್ಕಿ ಬರುತ್ತಿದ್ದ ವಿದ್ಯುತ್ ಬಿಲ್ ಶೂನ್ಯವಾಗಿದೆ.