ಮಂಗಳೂರು: ರಾಜ್ಯ ಮತ್ತು ಕೇಂದ್ರದಲ್ಲಿ ಕಣ್ಣು ಕಾಣದ ಸರ್ಕಾರಳಿದ್ದು, ಸಿದ್ದರಾಮಯ್ಯ ಸರ್ಕಾರ ಆರಂಭಿಸಿದ್ದ ಧರ್ಮಾರ್ಥದ ಅಕ್ಕಿ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ನೆರವಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಅಕ್ಕಿ ನೆರೆ ಸಂತ್ರಸ್ತರ ಕಷ್ಟಕ್ಕೆ ನೆರವಾಗಿದೆ: ರಮಾನಾಥ ರೈ - ರಮಾನಾಥ್ ರೈ
ಮಾಜಿ ಸಚಿವ ರಮಾನಾಥ ರೈ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನೆರೆ ಸಂತ್ರಸ್ತರಿಗೆ ಏಕೆ ಪರಿಹಾರ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ನೆರೆ ಸಂತ್ರಸ್ತರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ದ.ಕ ಜಿಲ್ಲಾ ಕಾಂಗ್ರೆಸ್ನಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯ ಮತ್ತು ಕೇಂದ್ರದಲ್ಲಿ ಕಿವಿ ಕೇಳದ, ಬಾಯಿ ಇಲ್ಲದ ಸರ್ಕಾರ ಅಧಿಕಾರದಲ್ಲಿದೆ. ಜನತೆ ಸರ್ಕಾರದ ಕಣ್ಣು ತೆರೆಸುವ ಕಾರ್ಯ ಮಾಡಬೇಕಾಗಿದೆ. ರಾಜ್ಯ ಸರ್ಕಾರ ಅಧಿಕಾರ ಉಳಿಸಿಕೊಳ್ಳಲು ಮಾತ್ರ ಪ್ರಯತ್ನಿಸುತ್ತಿದೆ. ಆದರೆ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಐಟಿ, ಇಡಿ ಯಾರ ಕೈಯಲ್ಲಿದೆ ಎಂಬ ಜ್ಞಾನ ಇಲ್ಲದ ವ್ಯಕ್ತಿ ಅವರು. ಬಿಜೆಪಿಯಲ್ಲಿ ಹಾಸ್ಯಗಾರನ ಕೊರತೆಯನ್ನು ನಳಿನ್ ತುಂಬಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿರುವುದು ಸರಿಯಾಗಿದೆ. ದ.ಕ ಜಿಲ್ಲೆಯಲ್ಲಿ ನೆರೆಯಿಂದ ದೊಡ್ಡ ಮಟ್ಟದ ಸಮಸ್ಯೆ ಆದರೂ ಕೇಂದ್ರ ತಂಡವನ್ನು ಕರೆಸಲು ಕಟೀಲ್ಗೆ ಆಗಲಿಲ್ಲ ಎಂದು ರಮಾನಾಥ್ ರೈ ಕಿಡಿಕಾರಿದ್ದಾರೆ.