ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ ಅನನ್ಯ ಕೆ ಎ ಮಂಗಳೂರು (ದಕ್ಷಿಣ ಕನ್ನಡ): ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿಯು ಎಲ್ಲ ಜಿಲ್ಲೆಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದುಕೊಂಡಿದೆ. 2022 ರಲ್ಲಿ 88.02 ಫಲಿತಾಂಶ ಪಡೆದಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ 95.33 ಶೇಕಡ ಫಲಿತಾಂಶ ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ.
ಕಲಾ ವಿಭಾಗದಲ್ಲಿ ವಿದ್ಯಾರ್ಥಿನಿ ಟಾಪರ್ : ಕಲಾ ವಿಭಾಗ (ಆರ್ಟ್ಸ್)ದಲ್ಲಿ ಓರ್ವ ವಿದ್ಯಾರ್ಥಿನಿ ಟಾಪರ್ ಆಗಿದ್ದಾರೆ. ಪುತ್ತೂರಿನ ವಿವೇಕಾನಂದ ಪಿ ಯು ಕಾಲೇಜಿನ ಮಂಜುಶ್ರೀ 591 ಅಂಕ ಪಡೆಯುವ ಮೂಲಕ ಆರ್ಟ್ಸ್ ವಿಭಾಗದಲ್ಲಿ ಟಾಪರ್ ಆಗಿದ್ದಾರೆ. ಮಂಜುಶ್ರೀ ತೀರ್ಥರಾಮ ಮತ್ತು ಸಂಧ್ಯಾ ಅವರ ಪುತ್ರಿಯಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 6 ಮಂದಿ ಟಾಪರ್: ವಾಣಿಜ್ಯ ವಿಭಾಗ (ಕಾಮರ್ಸ್)ದಲ್ಲಿ ಆರು ಮಂದಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಮೂಡಬಿದಿರೆ ಆಳ್ವಾಸ್ ಪಿ ಯು ಕಾಲೇಜಿನ ಅನನ್ಯ 600ಕ್ಕೆ 600 ಪೂರ್ಣ ಅಂಕ ಪಡೆಯುವ ಮೂಲಕ ಕೇವಲ ಟಾಪರ್ ಅಲ್ಲದೇ ಇಡೀ ರಾಜ್ಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಅಶೋಕ್ ಕೆ ಇ ಮತ್ತು ನಳಿನಿ ಅವರ ಪುತ್ರಿಯಾಗಿದ್ದಾರೆ.
ಇನ್ನು ಮೂಡಬಿದಿರೆಯ ಎಕ್ಸೆಲೆಂಟ್ ಪಿ ಯು ಕಾಲೇಜಿನ ಖುಷಿ ವೈ ಬಾಗಲಕೋಟೆ ಅವರು 600 ಕ್ಕೆ 596 ಅಂಕ ಪಡೆದಿದ್ದಾರೆ. ಇವರು ಯೋಗೀಶ್ ಡಿ ಮತ್ತು ಶ್ವೇತಾ ಎಂಬವರ ಪುತ್ರಿಯಾಗಿದ್ದಾರೆ. ಮಂಗಳೂರಿನ ವಿಕಾಸ್ ಪಿ ಯು ಕಾಲೇಜಿನ ಸ್ವಾತಿ ಎಸ್ ಪೈ ಇವರು ಕೂಡ 596 ಅಂಕ ಪಡೆದಿದ್ದಾರೆ. ಇವರು ಸುರೇಂದ್ರ ಕೆ ಪೈ ಮತ್ತು ಲತಾ ಪೈ ಅವರ ಪುತ್ರಿಯಾಗಿದ್ದಾರೆ.
ಹಾಗೆ ಮೂಡಬಿದಿರೆಯ ಆಳ್ವಾಸ್ ಪಿ ಯು ಕಾಲೇಜಿನ ಕೆ ದಿಶಾ ರಾವ್ 600 ಕ್ಕೆ 596 ಅಂಕ ಪಡೆದಿದ್ದಾರೆ. ಇವರು ಬಾಲಕೃಷ್ಣ ರಾವ್ ಮತ್ತು ಶಾರದಾ ಎಂಬವರ ಪುತ್ರಿಯಾಗಿದ್ದಾರೆ. ಮಂಗಳೂರಿನ ಕೆನರಾ ಪಿಯು ಕಾಲೇಜಿನ ಎನ್ ಪ್ರತೀಕ್ ಮಲ್ಯ ಅವರು 595 ಅಂಕ ಪಡೆದಿದ್ದು, ಇವರು ವೆಂಕಟೇಶ್ ಮಲ್ಯ ಮತ್ತು ರಾಧಿಕ ಮಲ್ಯ ಅವರ ಪುತ್ರರಾಗಿದ್ದಾರೆ. ಪುತ್ತೂರು ವಿವೇಕಾನಂದ ಪಿ ಯು ಕಾಲೇಜಿನ ಆದಿತ್ಯನಾರಾಯಣ ಪಿ ಎಸ್ 595 ಅಂಕ ಪಡೆದಿದ್ದಾರೆ. ಇವರು ಶಂಕರ ಭಟ್ ಮತ್ತು ಎ ಕೆ ದೇವಕಿ ಅವರ ಪುತ್ರನಾಗಿದ್ದಾರೆ.
ವಿಜ್ಞಾನ ವಿಭಾಗದಿಂದ ಇಬ್ಬರೂ ಟಾಪರ್ಸ್: ವಿಜ್ಞಾನ ವಿಭಾಗ(ಸೈನ್ಸ್)ದಲ್ಲಿ ಅಳಿಕೆಯ ಸತ್ಯಸಾಯಿ ಲೋಕಸೇವಾ ಪಿ ಯು ಕಾಲೇಜಿನ ಯೋಗೇಶ್ ತುಕರಾಮ ಬಡಚಿ 594 ಅಂಕ ಪಡೆದಿದ್ದಾರೆ. ಇವರು ತುಕರಾಮ್ ಬಡಚಿ ಮತ್ತು ಪುಷ್ಪ ಬಡಚಿ ಅವರ ಪುತ್ರರಾಗಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ಪ್ರಚಿತಾ ಎಂ 594 ಅಂಕ ಪಡೆದಿದ್ದಾರೆ. ಇವರು ಮಲ್ಲೇಶ ಎಂ ಎಂ ಮತ್ತು ಜ್ಯೋತಿ ಎಸ್ ಆರ್ ಅವರ ಪುತ್ರಿಯಾಗಿದ್ದಾರೆ.
ಧನ್ಯವಾದ ಅರ್ಪಿಸಿದ ಅನನ್ಯ: 600 ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡ ಅನನ್ಯ ಈ ಕುರಿತು ತನ್ನ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಮೂಲತಃ ಕೊಡಗಿನವರಾಗಿರುವ ಅನನ್ಯ ತನ್ನ ಈ ಸಾಧನೆಗೆ 'ಕೇವಲ ನನ್ನ ಪರಿಶ್ರಮದಿಂದ ಮಾತ್ರ ಇದು ಸಾಧ್ಯವಲ್ಲ, ನನ್ನೆಲ್ಲ ಗುರುಗಳಿಗೆ ಧನ್ಯವಾದ. ಅಲ್ಲದೆ ನನ್ನ ಅಪ್ಪ ಅಮ್ಮನಿಗೆ ವಿಶೇಷ ಥ್ಯಾಂಕ್ಸ್ ಎಂದು ತನ್ನ ಸಾಧನೆಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಅನನ್ಯ ದಿನಚರಿ ಹೀಗಿತ್ತು:ಪ್ರತಿದಿನ ಬೆಳಗ್ಗೆ 4.45 ರಿಂದ 6 ಗಂಟೆ ತನಕ ಓದಿ ನಂತರ ಕಾಲೇಜಿಗೆ ಹೋಗುತ್ತಿದ್ದೆ. ಕಾಲೇಜು ಮುಗಿದ ನಂತರ ಸಿ ಎಸ್ ಕೋಚಿಂಗ್ಗೆ ತೆರಳುತ್ತಿದ್ದೆ. ಮತ್ತೇ ಮನೆಗೆ ಬಂದು ರಾತ್ರಿ 10.30 ತನಕ ತನ್ನ ಓದು ಮುಂದಿವರೆಸುತ್ತಿದ್ದೆ. ಜೊತೆಗೆ ಕ್ಲಾಸ್ಗಳಲ್ಲಿ ಸರಿಯಾಗಿ ಕೇಳಿಸಿಕೊಂಡಿರುವುದೇ ನನ್ನ ಯಶಸ್ಸಿಗೆ ಕಾರಣ ಅಂತಾರೆ ಅನನ್ಯ.
ಇದನ್ನೂ ಓದಿ:ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ದಕ್ಷಿಣ ಕನ್ನಡ ಫಸ್ಟ್, ಯಾದಗಿರಿ ಲಾಸ್ಟ್