ಪುತ್ತೂರು (ದಕ್ಷಿಣಕನ್ನಡ): ರೈತರ ಫಲವತ್ತಾದ ಕೃಷಿ ಭೂಮಿಯನ್ನು ದೊಡ್ಡ ದೊಡ್ಡ ಬಂಡವಾಳಶಾಹಿಗಳು ಖರೀದಿಸುವಂತೆ ಭೂ ಸುಧಾರಣೆ ಕಾಯ್ದೆಯ ಲಾಬಿಗೆ ಸರ್ಕಾರ ಮಣಿದಿದೆ. ಇದನ್ನು ಎಸ್‌ಡಿಪಿಐ ಉಗ್ರವಾಗಿ ಖಂಡಿಸುತ್ತದೆ ಮತ್ತು ರೈತರನ್ನ ಬಂಡವಾಳಶಾಹಿಗಳ ಗುಲಾಮರನ್ನಾಗಿ ಮಾಡಿದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಎಚ್ಚರಿಕೆ ನೀಡಿದ್ದಾರೆ.
ರೈತರನ್ನ ಬಂಡವಾಳಶಾಹಿಗಳ ಗುಲಾಮರನ್ನಾಗಿ ಮಾಡಿದ್ರೆ ರಾಜ್ಯಾದ್ಯಂತ ಹೋರಾಟ: ಎಸ್‌ಡಿಪಿಐ ಎಚ್ಚರಿಕೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಮಾತನಾಡಿದ ಇಕ್ಬಾಲ್ ಬೆಳ್ಳಾರೆ, ರೈತರ ಹಿತಕ್ಕಾಗಿ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದಿತ್ತು. ಇದರಿಂದಾಗಿ ಕೃಷಿಯೇತರರು ಕೃಷಿ ಭೂಮಿಯನ್ನ ಖರೀದಿಸಲು ಆಗುತ್ತಿರಲಿಲ್ಲ.
ಇದರಿಂದ ದೊಡ್ಡ ಕೈಗಾರಿಕೋದ್ಯಮಿಗಳಿಗೆ ತೊಂದರೆ ಆಗುತ್ತದೆ ಎಂದು ರಾಜ್ಯ ಸರ್ಕಾರ ರೈತರ ಜಮೀನುಗಳನ್ನ ಸುಲಭವಾಗಿ ಕೃಷಿಯೇತರರು ಖರೀದಿ ಮಾಡುವಂತೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿದೆ. ಒಂದು ವೇಳೆ ಬಂಡವಾಳಶಾಹಿಗಳು ರೈತರ ಭೂಮಿ ಖರೀದಿಸಿದರೆ ಮುಂದೆ ರೈತರು ಬಂಡವಾಳಶಾಹಿಗಳ ಗುಲಾಮರಾಗಲಿದ್ದಾರೆ. ಇದರಿಂದ ದೇಶದ ಕೃಷಿ ಚಟುವಟಿಕೆಯೂ ಕುಂಠಿತವಾಗುತ್ತದೆ ಎಂದರು.
ಆರೋಗ್ಯದ ವಿಚಾರದಲ್ಲೂ ರಾಜಕೀಯ: ಕೊರೊನಾ ಚಿಕಿತ್ಸಾ ವಿಚಾರವಾಗಿ ಸರ್ಕಾರ ಖಾಸಗಿ ಆಸ್ಪತ್ರೆಗಳೊಂದಿಗೆ ಲಾಬಿ ಮಾಡುವ ಕೆಲಸ ಮಾಡುತ್ತಿದೆ. ಬಡವರಿಗೆ ದುಬಾರಿ ಹಣ ಕೊಟ್ಟು ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಆರೋಗ್ಯದ ವಿಚಾರದಲ್ಲೂ ಸರ್ಕಾರ ರಾಜಕೀಯ ಮಾಡುವ ತಂತ್ರ ಹೂಡಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಚಿಕಿತ್ಸಾ ದರ ಕನಿಷ್ಠಗೊಳಿಸಬೇಕೆಂದು ಆಗ್ರಹಿಸಿದರು.