ಬೆಳ್ತಂಗಡಿ (ದ.ಕ):ಎಲ್ಲರೂ ಧರ್ಮದ ಮರ್ಮವನ್ನು ಅರಿತು ಸಾರ್ಥಕ ಜೀವನ ನಡೆಸಬೇಕು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು. ಅವರು ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸರ್ವಧರ್ಮ ಸಮ್ಮೇಳನದ 88ನೇ ಅಧಿವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳವು ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಸ್ಥಳ. ಅನ್ನದಾನ, ವಿದ್ಯಾದಾನ, ಔಷಧಿ ದಾನ ಮತ್ತು ಅಭಯ ದಾನ ಎಂಬ ಚತುರ್ವಿಧ ದಾನಗಳು ಇಲ್ಲಿ ನಿತ್ಯೋತ್ಸವವಾಗಿದ್ದು, ಧರ್ಮಸ್ಥಳವು ಮಾದರಿ ಧರ್ಮಕ್ಷೇತ್ರವಾಗಿದೆ. ಸರ್ವ ಧರ್ಮ ಸಮನ್ವಯ ಕೇಂದ್ರವಾಗಿರುವ ಧರ್ಮಸ್ಥಳದ ಮೂಲಕ ವಿಶ್ವ ಮಾನವ ಸಂದೇಶವನ್ನು ಜಗತ್ತಿಗೆ ಸಾರುತ್ತಿರುವ ದೇವ ಸ್ವರೂಪಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದರು. ಈ ಸಂದರ್ಭದಲ್ಲಿ ಹೆಗ್ಗಡೆ ದಂಪತಿಯನ್ನು ಸಚಿವರು ಹಾಗೂ ಅವರ ಪತ್ನಿ ಶೈಲಾ ಸೋಮಣ್ಣ ಗೌರವಿಸಿ ಅಭಿನಂದಿಸಿದರು.
ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನ ಮಾನವ ಹಿತ ಹಾಗೂ ಲೋಕಕಲ್ಯಾಣವೇ ಎಲ್ಲಾ ಧರ್ಮಗಳ ಉದ್ದೇಶವಾಗಿದೆ. ಧರ್ಮದ ಮರ್ಮವಿರುವುದು ಆಚರಣೆಯಲ್ಲಿ. ಧರ್ಮದಲ್ಲಿ ಸತ್ವವಿದೆ, ಸತ್ಕಾರ್ಯಕ್ಕೆ ಪ್ರೇರಣೆ ಇದೆ. ಧರ್ಮವು ಎಲ್ಲರನ್ನು ಒಗ್ಗೂಡಿಸುವ ಸಾಧನವಾಗಿದ್ದು, ಮಾನವ ಧರ್ಮವೇ ಶ್ರೇಷ್ಠವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ನುಡಿದರು.
ನಾವು ಆಚರಿಸುವ ಧರ್ಮಗಳಲ್ಲಿ ವೈಯಕ್ತಿಕ ಧರ್ಮ ಮತ್ತು ವ್ಯಾವಹಾರಿಕ ಧರ್ಮ ಎಂದು ಎರಡು ವಿಧ. ಪ್ರತಿಯೊಬ್ಬರೂ ಅವರವರ ಧರ್ಮವನ್ನು ಪ್ರೀತಿಸಬೇಕು, ಗೌರವಿಸಬೇಕು ಮತ್ತು ಆಚರಿಸಬೇಕು. ಆದರೆ ಮನೆಯಿಂದ ಹೊರಗೆ ಉದ್ಯೋಗಕ್ಕೆ ಹಾಗೂ ವ್ಯವಹಾರಕ್ಕೆ ಹೋದಾಗ ಇನ್ನೊಬ್ಬರಿಗೆ ತೊಂದರೆಯಾಗದಂತೆ ನಮ್ಮ ಧರ್ಮವನ್ನು ಪಾಲಿಸಿಕೊಂಡು, ನಮ್ಮ ವೃತ್ತಿಯನ್ನು ಹಾಳುಮಾಡಿಕೊಳ್ಳದೆ ಅದನ್ನು ಕಾಪಾಡಿಕೊಳ್ಳಬೇಕು ಎಂದು ಧರ್ಮಾಧಿಕಾರಿ ಸಲಹೆ ನೀಡಿದರು.
ಇಂದು ಜಾತಿ-ಮತ, ಲಿಂಗ ತಾರತಮ್ಯ, ಮೇಲು-ಕೀಳು ಎಂಬ ಭಾವನೆ ದೂರವಾಗಿದೆ. ಎಲ್ಲರೂ ಸರಿಸಮಾನರಾಗಿ, ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪ್ರಗತಿ ಸಾಧಿಸಲು ಉತ್ತಮ ಅವಕಾಶಗಳಿವೆ. ಧರ್ಮ ಸಮನ್ವಯತೆಗೆ ಕೊರೊನಾ ವ್ಯಾಧಿ ಉತ್ತಮ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಧರ್ಮಸ್ಥಳದಲ್ಲಿ ಚತುರ್ವಿಧ ದಾನ ಕಾರ್ಯವನ್ನು ನಿರಂತರ ಮಾಡಲಾಗುತ್ತಿದೆ. ಈ ವರ್ಷ 61 ಕೋಟಿ 23 ಲಕ್ಷ ರೂಪಾಯಿಯನ್ನು ವೈದ್ಯಕೀಯ ಹಾಗೂ ಶೈಕ್ಷಣಿಕ ನೆರವು ನೀಡಲಾಗಿದೆ. 1,135 ದೇವಾಲಯಗಳ ಜೀರ್ಣೋದ್ಧಾರಕ್ಕೆ ನೆರವು ನೀಡಿರುವುದಲ್ಲದೆ, ಧರ್ಮೋತ್ಥಾನ ಟ್ರಸ್ಟ್ ಆಶ್ರಮದಲ್ಲಿ 260 ಪ್ರಾಚೀನ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ 5 ಲಕ್ಷ ಸ್ವ-ಸಹಾಯ ಸಂಘಗಳನ್ನು ರಚಿಸಿದ್ದು, 43 ಲಕ್ಷ ಸದಸ್ಯರು ಸೇರ್ಪಡೆಯಾಗಿದ್ದಾರೆ. ಇವರಿಗೆ ಬ್ಯಾಂಕ್‍ಗಳ ಮೂಲಕ 13 ಸಾವಿರ ಕೋಟಿ ರೂ. ವ್ಯವಹಾರಕ್ಕಾಗಿ ಒದಗಿಸಲಾಗಿದೆ. ಹೀಗೆ ಜಾತಿ-ಮತ ಬೇಧವಿಲ್ಲದೆ ಧರ್ಮಸ್ಥಳದಿಂದ ಎಲ್ಲರಿಗೂ ಸ್ವಾವಲಂಬಿ ಜೀವನಕ್ಕೆ ಅಭಯದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ ಕನಕಗಿರಿ ಜೈನ ಮಠದ ಪೂಜ್ಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಪ್ರತಿಯೊಂದು ವಸ್ತುವಿನಲ್ಲಿರುವ ಸಹಜ ಸ್ವಭಾವವೇ ಧರ್ಮ ಆಗಿದೆ. ಮಾನವನಲ್ಲಿ ಇಂದು ಅನೇಕ ಕಾರಣಗಳಿಂದ ಸಹಜ ಸ್ವಭಾವ ಕಡಿಮೆಯಾಗುತ್ತಿದೆ. ಪ್ರಾಣಿ ಪಕ್ಷಿಗಳು ಹಾಗೂ ಪ್ರಕೃತಿ ತಮ್ಮ ಸಹಜ ಸ್ವಭಾವವನನ್ನು ಕಾಪಾಡಿಕೊಂಡು ಬಂದಿವೆ. ಆದರೆ ಮನುಷ್ಯನ ಅತಿಯಾದ ಆಸೆ-ಅಕಾಂಕ್ಷೆಗಳಿಂದ ಭೂಮಿ, ನೀರು, ಗಾಳಿ, ಇಂಧನ – ಎಲ್ಲವೂ ಇಂದು ಮಲಿನವಾಗಿದೆ. ನಮ್ಮ ಆಚರಣೆಯಲ್ಲಿ ಪ್ರಮಾದ ಮಾಡದೆ, ಪರಿಸರವನ್ನು ಪರಿಶುದ್ಧವಾಗಿ ಸಂರಕ್ಷಣೆ ಮಾಡಬೇಕು ಎಂದು ವಿರೇಂದ್ರ ಹೆಗ್ಗಡೆ ಕಿವಿಮಾತು ಹೇಳಿದರು.