ಕರ್ನಾಟಕ

karnataka

ETV Bharat / state

ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆ: ರಾಜಕೀಯ ನಿವೃತ್ತಿ ಪಡೆದ ಎಸ್ ಅಂಗಾರ.. - ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭಾಗೀರಥಿ ಮುರುಳ್ಯ ಅವರನ್ನು ಆಯ್ಕೆ ಮಾಡಿರುವ ಹಿನ್ನೆಲೆ ಸಚಿವ ಅಂಗಾರ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ಸಚಿವ ಅಂಗಾರ
ಸಚಿವ ಅಂಗಾರ

By

Published : Apr 12, 2023, 3:08 PM IST

ಸುಳ್ಯ (ಮಂಗಳೂರು):ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಭಾಗೀರಥಿ ಮುರುಳ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಈ ನಡುವೆ ಎಸ್. ಅಂಗಾರ ಅವರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸಚಿವ ಅಂಗಾರ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಮಾತ್ರವಲ್ಲದೇ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಳ್ಯದ ವೆಂಕಟ್ ವಳಲಂಬೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಶಾಂತಿನಗರ ಮುರುಳ್ಯದ ದಿ.ಗುರುವ ಮತ್ತು ದಿ.ಕೊರಗ್ಗು ದಂಪತಿಯ ಪುತ್ರಿ ಭಾಗೀರಥಿ ಮುರುಳ್ಯ ಅವರನ್ನು ಈ ಬಾರಿ ಸುಳ್ಯದಿಂದ ಬಿಜೆಪಿ ಕಣಕಿಳಿಸಿದೆ. ಭಾಗೀರಥಿ ಮುರುಳ್ಯ ಅವರು ಪಿಯುಸಿ ವಿದ್ಯಾಭ್ಯಾಸ ಹೊಂದಿದ್ದು, ಪ್ರಸ್ತುತ ಹೈನುಗಾರಿಕೆ, ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿದ್ದಾರೆ.

ಭಾಗೀರಥಿ ಮುರುಳ್ಯ

ಮೊದಲಿಗೆ ಬೀಡಿ ಕಾರ್ಮಿಕರಾಗಿ, ಗೌರವ ಶಿಕ್ಷಕಿಯಾಗಿಯೂ ದುಡಿದಿದ್ದರು. ರಾಷ್ಟ್ರಸೇವಿಕಾ ಸಮಿತಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಭಾಗೀರಥಿ ಅವರು ರಾಷ್ಟ್ರ ಸೇವಿಕ ಸಮಿತಿ ಸದಸ್ಯೆಯಾಗಿಯೂ ತೊಡಗಿಸಿಕೊಂಡಿದ್ದರು. ಬಿಜೆಪಿಯಿಂದ ಸ್ಪರ್ಧಿಸಿ ಎಣ್ಮೂರು ತಾಲೂಕು ಪಂಚಾಯತ್ ಕ್ಷೇತ್ರದ ಸದಸ್ಯೆಯಾಗಿ, ಜಾಲ್ಸೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯೆಯಾಗಿಯೂ ದುಡಿದಿದ್ದಾರೆ.

ಸುಳ್ಯ ಬಿಜೆಪಿ ಮಂಡಲ ಸಮಿತಿ ಸದಸ್ಯೆಯಾಗಿ, ದ.ಕ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ, ಬಿಜೆಪಿ ಪುತ್ತೂರು ಮಂಡಲ ಸಹಪ್ರಭಾರಿಯಾಗಿ, ರಾಜ್ಯ ಬಿಜೆಪಿ ಎಸ್.ಸಿ.ಮೋರ್ಚಾದ ಉಪಾಧ್ಯಕ್ಷೆಯಾಗಿ ಉಡುಪಿ, ದ. ಕ ಸಹಪ್ರಭಾರಿಯಾಗಿ, ದ. ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆಯಾಗಿ, ಬೆಳ್ತಂಗಡಿ ಮಂಡಲದ ಸಹಪ್ರಭಾರಿಯಾಗಿದ್ದರು. ಪ್ರಸ್ತುತ ರಾಜ್ಯ ಬಿಜೆಪಿ ಮಹಿಳಾ ಮೋರ್ಚದ ಕಾರ್ಯಕಾರಿಣಿ ಸದಸ್ಯೆಯಾಗಿ, ಕೊಡಗು ಜಿಲ್ಲೆ ಮತ್ತು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ವಿವಿಧ ಸಹಕಾರಿ ಸಂಘಗಳಲ್ಲಿ, ಧಾರ್ಮಿಕ ಕ್ಷೇತ್ರದಲ್ಲೂ ಸಾಮಾಜಿಕ ಕ್ಷೇತ್ರದಲ್ಲೂ ಭಾಗೀರಥಿ ಅವರು ತೊಡಗಿಸಿಕೊಂಡಿದ್ದಾರೆ.

ನನ್ನ ಪ್ರಾಮಾಣಿಕತೆ ನನಗೆ ಮುಳ್ಳಾಯಿತು - ಎಸ್.ಅಂಗಾರ:ಪಕ್ಷಕ್ಕೋಸ್ಕರ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇ ನನಗೆ ಮುಳ್ಳಾಯಿತು. ಕಳೆದ ಆರು ಬಾರಿಯೂ ನಾನು ಪ್ರಾಮಾಣಿಕವಾಗಿಯೇ ಪಕ್ಷಕ್ಕಾಗಿ ದುಡಿದಿದ್ದೇನೆ. ವರಿಷ್ಠರು ಸೀಟ್ ಹಂಚಿಕೆ ಮಾಡುವಾಗ ನನ್ನ ಅಭಿಪ್ರಾಯ ತೆಗೆದುಕೊಳ್ಳಬೇಕಿತ್ತು. ಪಕ್ಷದ ನಡೆಯಿಂದ ನನಗೆ ಬೇಸರವಾಗಿದೆ. ರಾಜಕಾರಣದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಮುಂದಕ್ಕೆ ಯಾವುದೇ ಪ್ರಚಾರ ಕಣದಲ್ಲೂ ತಾನಿಲ್ಲ. ಟಿಕೆಟ್ ತಪ್ಪಿದ್ದಕ್ಕೆ ನನಗೆ ಬೇಸರವಿಲ್ಲ. ಆದರೆ ಪಕ್ಷಕ್ಕೆ, ಸಮಾಜಕ್ಕೆ ನಾನು ಸಲ್ಲಿಸಿದ ಸೇವೆಗೆ ಗೌರವ ನೀಡಲಿಲ್ಲ ಎಂದು ಸುಳ್ಯ ಶಾಸಕ ಎಸ್ ಅಂಗಾರ ಅಸಮಾಧಾನ ವ್ಯಕ್ತಪಡಿಸಿದರು.

ಕೆಲಸ ಮಾಡಿರುವುದಕ್ಕೆ ತೃಪ್ತಿ ಇದೆ - ಮಠಂದೂರು: ಟಿಕೆಟ್ ಕೈ ತಪ್ಪಿರುವ ಬಗ್ಗೆ ಈಟಿವಿ ಭಾರತ್​ ಜೊತೆಗೆ ಮಾತನಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಈ ತನಕ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿ ಕೆಲಸ ಮಾಡಿರುವ ತೃಪ್ತಿ ಇದೆ. ಟಿಕೆಟ್ ವಿಚಾರದಲ್ಲಿ ಪಕ್ಷ ತೆಗೆದುಕೊಂಡ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಮುಂದೆಯೂ ಪಕ್ಷದ ಕಾರ್ಯಕರ್ತನಾಗಿ ಕೆಲಸವನ್ನು ಮುಂದುವರೆಸುತ್ತೇನೆ ಎಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷ ರಾಜೀನಾಮೆ: ಆರು ಬಾರಿ ಗೆದ್ದು ಸುಳ್ಯದಲ್ಲಿ ಬಿಜೆಪಿ ಭದ್ರವಾಗಲು ಕಾರಣರಾದ ಸಚಿವ ಎಸ್ ಅಂಗಾರ ಅವರಿಗೆ ಚುನಾವಣಾ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸ್ಥಾನದಿಂದ ವೆಂಕಟ್ ವಳಲಂಬೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ರಾಜೀನಾಮೆ ಸಂದೇಶ ಕಳುಹಿಸಿರುವುದಾಗಿಯೂ ತಿಳಿದು ಬಂದಿದೆ.

ಕಳೆದ 30 ವರ್ಷಗಳ ಕಾಲ ಕ್ಷೇತ್ರ ಮತ್ತು ಪಕ್ಷಕ್ಕೆ ಯಾವುದೇ ಚ್ಯುತಿ ಬಾರದಂತೆ ದುಡಿದಿರುವ ಸಾಮಾನ್ಯ ಮನೆತನದಿಂದ ಬಂದಿರುವ ಸರಳ ಸಜ್ಜನಿಕೆಯ ಎಲ್ಲರ ಜನಮನ ಗೆದ್ದಿರುವ ಎಸ್ ಅಂಗಾರರಂತಹ ಪ್ರಾಮಾಣಿಕ ಕಾರ್ಯಕರ್ತನೊಂದಿಗೆ ಚರ್ಚಿಸದೇ ಏಕಪಕ್ಷೀಯವಾಗಿ ಅಭ್ಯರ್ಥಿ ಘೋಷಣೆ ಮಾಡಿರುವುದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿರುತ್ತದೆ. ಆದುದರಿಂದ ನನ್ನ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಈ ಕ್ಷಣದಿಂದಲೇ ರಾಜೀನಾಮೆ ನೀಡಿರುತ್ತೇನೆ ಎಂದು ಜಿಲ್ಲಾ ಅಧ್ಯಕ್ಷರಾದ ಸುದರ್ಶನ ಮೂಡುಬಿದಿರೆ ಇವರಿಗೆ ರಾಜೀನಾಮೆ ಸಲ್ಲಿಸಿರುತ್ತೇನೆ ಎಂದು ವೆಂಕಟ್ ವಳಲಂಬೆ ಅವರು ತಿಳಿಸಿದ್ದಾರೆ.

ಇದನ್ನೂ ಓದಿ :ದಕ್ಷಿಣ ಕನ್ನಡ, ಉಡುಪಿಯಲ್ಲಿ ಹಾಲಿ ಐವರು ಶಾಸಕರಿಗೆ ಬಿಜೆಪಿ ಕೊಕ್.. ಹೊಸ ಪ್ರಯೋಗಕ್ಕೆ ಕಾರಣ ಏನು?

ABOUT THE AUTHOR

...view details