ಮಂಗಳೂರು: ಗೋಲ್ಡ್ ಬಿಸ್ಕತ್ ವಿಚಾರದಲ್ಲಿ ಇಬ್ಬರು ಸಹೋದರರನ್ನು ಕಿಡ್ನ್ಯಾಪ್ ಮಾಡಿದ್ದ ಆರೋಪದಡಿ ಐದು ಮಂದಿ ಖದೀಮರನ್ನು ಬಂಧಿಸುವಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಅರ್ಕುಳ ಗ್ರಾಮದ ರೈಲ್ವೆ ಹಳಿ ಬಳಿ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಈ ವೇಳೆ ರೈಲ್ವೆ ಹಳಿ ಬಳಿ ಕೆಲವರು ಮಾತನಾಡುತ್ತಿದ್ದದ್ದನ್ನು ಕಂಡು ವಿಚಾರಿಸಲು ಹೋಗಿದ್ದಾರೆ. ಖದೀಮರು ಪೊಲೀಸರ ಮೇಲೆ ಕಲ್ಲು ಎಸೆದು ಹಲ್ಲೆ ಮಾಡಿ, ಓಡಿ ಹೋಗಿದ್ದಾರೆ. ಆಗ ಗ್ರಾಮಾಂತರ ಪೊಲೀಸರು ಸಿಸಿಟಿವಿ, ವಾಹನ ಸಂಖ್ಯೆಯನ್ನು ಪರಿಶೀಲಿಸಿ, ಆರೋಪಿಗಳನ್ನು ಬಂಧಿಸಿದ್ದ ವೇಳೆ ಶಾರೂಕ್ ನನ್ನು ಅಪಹರಣ ಮಾಡಿರುವುದು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳು: ಅಪಹರಣದ ಆರೋಪದಡಿ ಉಪ್ಪಿನಂಗಡಿಯ ಕರ್ವೇಲ್ ಸಿದ್ದಿಕ್ (39) ಬಂಟ್ವಾಳದ ಕಲಂದರ್ ಸಾಫಿ ಗಡಿಯಾರ(22), ಬೆಳ್ತಂಗಡಿಯ ಮುಹಮ್ಮದ್ ಇರ್ಷಾದ್ (28), ಬಂಟ್ವಾಳದ ಇರ್ಫಾನ್ (38), ಮಂಗಳೂರಿನ ಮೊಹಮ್ಮದ್ ರಿಯಾಜ್ (33) ಬಂಧಿತರು.
ಸಹೋದರರ ಅಪಹರಣ ಪ್ರಕರಣ:ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಮಂಗಳೂರಿನಲ್ಲಿ ಮಾತನಾಡಿ, ಆರೋಪಿಗಳು ಕಡಬ ತಾಲೂಕಿನ ಕೊಯಿಲ ಗ್ರಾಮದ ಶಾರೂಕ್ ಹಾಗೂ ಆತನ ಸಹೋದರ ನಿಜಾಮುದ್ದೀನ್ನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಶಾರೂಕ್ ನ ಕಿಸೆಯಲ್ಲಿದ್ದ 22,500 ನಗದು ಹಾಗೂ ಮೊಬೈಲ್ ದರೋಡೆ ಮಾಡಿದ್ದಾರೆ. ನಿಜಾಮುದ್ದೀನ್ ಬಳಿಯಲ್ಲಿದ್ದ ಮೊಬೈಲ್ ದರೋಡೆ ಮಾಡಿ ಆತನಿಗೆ ಥಳಿಸಿ 4 ಲಕ್ಷ ರೂ ತಂದುಕೊಡುವ ವರೆಗೂ ನಿನ್ನ ಸಹೋದರ ಶಾರೂಕ್ನನ್ನು ಬಿಡುವುದಿಲ್ಲ ಎಂದು ಹೇಳಿ ಆತನನ್ನು ಕಳುಹಿಸಿದ್ದಾರೆ. ನಿಜಾಮುದ್ದೀನ್ ಮನೆಗೆ ಬಂದಾಗ ತೀವ್ರ ಅಸ್ವಸ್ಥಗೊಂಡಿದ್ದರಿಂದ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಕಡಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅರ್ಕುಳ ಗ್ರಾಮದ ರೈಲ್ವೆ ಹಳಿಯ ಬಳಿ ಆಲ್ಟೋ ಕಾರಿನಲ್ಲಿದ್ದವರನ್ನು ಬೀಟ್ ಪೊಲೀಸರು ವಿಚಾರಿಸಿದ್ದಾರೆ.ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇವರು ಶಾರೂಕ್ ನನ್ನು ಅಪಹರಣ ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.