ಮಂಗಳೂರು: ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಹೆಸರಿನಲ್ಲಿ ಹುಕ್ಕಾ ಬಾರ್ ಮಾಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸಲಹೆ ನೀಡಿದ್ದಾರೆ. ಇದು ದೇಶದ್ರೋಹದ ಹೇಳಿಕೆಯಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಯಾರೇ ನಾಲ್ಕು ದಿನ ಜೈಲಿಗೆ ಹೋಗಿದ್ದರೂ ಅವರನ್ನು ಅಪಮಾನ ಮಾಡುವುದು ದೇಶದ್ರೋಹ. ಅಂತಹುದರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿದ್ದ ನೆಹರು ಅವರನ್ನು ಅಪಮಾನ ಮಾಡುತ್ತಿರುವುದು ಸರಿಯಲ್ಲ ಎಂದರು.
ಮಹಾತ್ಮ ಗಾಂಧಿಯನ್ನು ಅಪಹಾಸ್ಯ ಮಾಡುವುದು, ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ದೇಶಪ್ರೇಮಿ ಎನ್ನುವುದನ್ನು ಸಹಿಸಲು ಅಸಾಧ್ಯ. ಕಾಂಗ್ರೆಸ್ ಪಕ್ಷದವರನ್ನು ನೆಹರು ಕುಟುಂಬದ ಗುಲಾಮರು ಎನ್ನುತ್ತಾರೆ. ದೇವರ ದಯೆಯಿಂದ ನಾವು ಕಾರ್ಪೊರೇಟ್ ಕಂಪನಿಗಳ ಗುಲಾಮರಾಗಿಲ್ಲ. ಅದಾನಿ- ಅಂಬಾನಿ ಗುಲಾಮರಾಗಿಲ್ಲ. ಬಿಜೆಪಿ ಅವರು ಅವರ ಗುಲಾಮರಾಗಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರವೇ ಹೊಣೆ: ಕಬಕದಲ್ಲಿ ಸ್ವಾತಂತ್ರೋತ್ಸವದ ರಥಕ್ಕೆ ಎಸ್ಡಿಪಿಐ ಅಡ್ಡಿಪಡಿಸಿದ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಜಿಲ್ಲಾಡಳಿತ, ಸರ್ಕಾರ ಹೊಣೆಗಾರಿಕೆ ವಹಿಸಿ ಸರಿ ಮಾಡಬೇಕಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಘರ್ಷಣೆ ಆಗಲು ಬಿಡಲಿಲ್ಲ. ಈ ಘಟನೆಗೆ ಎರಡು ಮತೀಯವಾದಿ ಸಂಘಟನೆ ಮತ್ತು ಸರ್ಕಾರವೇ ಹೊಣೆಯಾಗಿದೆ ಎಂದು ಆರೋಪಿಸಿದರು.
ಓದಿ:ಬಿಜೆಪಿ ಸುಳ್ಳುಗಳ ಕುರಿತು ಜನರಿಗೆ ಸತ್ಯ ತಿಳಿಸುವ ಕಾರ್ಯ ಮಾಡಿ: ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ