ಮಂಗಳೂರು:ಪೌರತ್ವ ತಿದ್ದುಪಡಿ ಕಾಯ್ದೆ ಮಹಾತ್ಮ ಗಾಂಧಿಯವರ ಕನಸಾಗಿತ್ತು. ಅವರ ಕನಸನ್ನು ಬಿಜೆಪಿ ನನಸು ಮಾಡಿದೆ. ಸಿಎಎ, ಎನ್ಪಿಆರ್, ಎನ್ಆರ್ಸಿಯಿಂದ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ. ಆದರೆ ಅವರಲ್ಲಿ ವಿರೋಧ ಪಕ್ಷದವರು ಭಯ ಹುಟ್ಟಿಸಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ನಗರದ ಬಂಗ್ರಕೂಳೂರಿನಲ್ಲಿರುವ ಗೋಲ್ಡ್ ಪಿಂಚ್ ಮೈದಾನದಲ್ಲಿ ಬಿಜೆಪಿ ವತಿಯಿಂದ ನಡೆದ ಸಿಎಎ ಬಗ್ಗೆ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಎ ಕಾಯ್ದೆಯಿಂದ ಭಾರತದ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಮುಸ್ಲಿಮರಿಗೆ ಕೇಂದ್ರ ಸರ್ಕಾರ ರಕ್ಷಣೆ ನೀಡಲಿದೆ. ನಮ್ಮ ಸರ್ಕಾರದ ಧ್ಯೇಯವೆ ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್, ಸಬ್ ಕಾ ವಿಕಾಸ್ ಎಂದು ಹೇಳಿದರು.
ರಾಜನಾಥ್ ಸಿಂಗ್, ಕೇಂದ್ರ ಸಚಿವ ಭಾರತ ಹಿಂದೂ ದೇಶವೂ ಅಲ್ಲ, ಇಸ್ಲಾಂ ದೇಶವೂ ಅಲ್ಲ ಇದೊಂದು ಸೆಕ್ಯುಲರ್ ರಾಷ್ಟ್ರ. ಬಹುಸಂಸ್ಕೃತಿಯುಳ್ಳ ರಾಷ್ಟ್ರ. ದೇಶದ ಮುಸ್ಲಿಮರ ಎಲ್ಲಾ ಪಂಗಡಗಳಿಗೆ ನಮ್ಮ ಸರ್ಕಾರದಿಂದ ರಕ್ಷಣೆ ಇದೆ. ಆದರೆ ವಿರೋಧ ಪಕ್ಷಗಳು ದೇಶದಲ್ಲಿ ಅಶಾಂತಿ ಸೃಷ್ಟಿಸಲು ಹುನ್ನಾರ ನಡೆಸುತ್ತಿವೆ. ದೇಶದ ಮುಸ್ಲಿಮರೇ ನಾವು ನಿಮ್ಮ ಪೌರತ್ವ ಕಸಿದುಕೊಳ್ಳುವುದಿಲ್ಲ. ಆದರೆ ನುಸುಳುಕೋರರನ್ನ ಪತ್ತೆ ಮಾಡಲು ಮಾತ್ರ ಈ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದೆ. ಭಾರತ ಯಾರ ತಂಟೆಗೂ ಹೋಗುವುದಿಲ್ಲ. ಆದರೆ ನಮ್ಮ ತಂಟೆಗೆ ಯಾರಾದರೂ ಬಂದಲ್ಲಿ ನಾವು ಬಿಡೋದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ನಮ್ಮ ಸಂಕಲ್ಪ ಪತ್ರದಲ್ಲಿ ನಾವು ಬರೆದಂತೆ ನಡೆಯುತ್ತೇವೆ. ನಮ್ಮ ಕೃತಿ ಹಾಗೂ ಕಾರ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ನಮ್ಮ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿರುವ ಭರವಸೆಗಳನ್ನು ಈಡೇರಿಸಿದ್ದೇವೆ. ರಾಮ ಮಂದಿರ ನಿರ್ಮಾಣ, ತ್ರಿವಳಿ ತಲಾಖ್ ರದ್ದು, 370ನೇ ವಿಧಿ ರದ್ಧತಿ ಈಗಾಗಲೇ ಮಾಡಲಾಗಿದೆ. ಶೀಘ್ರವೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಿದ್ದೇವೆ. ಧರ್ಮದ ಆಧಾರದಲ್ಲಿ ದೇಶವನ್ನು ಒಡೆದದ್ದು ಕಾಂಗ್ರೆಸ್. ಬಿಜೆಪಿ ದೇಶದ ರಕ್ಷಣೆ ಮಾಡುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.