ಉಳ್ಳಾಲ : ಕಳೆದ ದಿನಗಳಿಂದ ಜಿಲ್ಲೆಯಲ್ಲಿ ಗಾಳಿ, ಮಳೆ ಅಬ್ಬರ ಹೆಚ್ಚುತ್ತಿರುವಂತೆಯೇ ಉಳ್ಳಾಲ, ಸೋಮೇಶ್ವರ ಹಾಗು ಉಚ್ಚಿಲ ಪ್ರದೇಶದಲ್ಲಿ ಕಡಲು ಕೂಡಾ ಪ್ರಕ್ಷುಬ್ದಗೊಂಡಿದೆ. ಇಲ್ಲಿನ ಅಲೆಗಳ ಅಬ್ಬರಕ್ಕೆ ತಡೆಗೋಡೆಗಾಗಿ ಹಾಕಲಾಗಿದ್ದ ಬೃಹತಾಕಾರದ ಕಲ್ಲುಗಳು ಸಮುದ್ರ ಪಾಲಾಗುತ್ತಿದ್ದು, ಕಡಲತಡಿಯ ಜನರನ್ನು ಆತಂಕಕ್ಕೀಡು ಮಾಡಿದೆ.
ಕಳೆದ ಹಲವು ವರ್ಷದಿಂದ ಕಡಲ ಕೊರೆತದಿಂದಾಗಿ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪರಿಸರದಲ್ಲಿ ಮನೆಗಳು ಸಮುದ್ರ ಪಾಲಾಗಿದ್ದವು. ಇದರ ಜೊತೆಗೆ ಕೆಲವು ಮನೆಗಳಿಗೂ ಹಾನಿಯಾಗಿತ್ತು. ಅದರಲ್ಲೂ ಕಳೆದ ವರ್ಷವಂತೂ ಕಡಲ್ಕೊರೆತದ ಸಮಸ್ಯೆ ಈ ಭಾಗದಲ್ಲಿ ಬಹಳಷ್ಟು ತೊಂದರೆ ಉಂಟು ಮಾಡಿತ್ತು. ಇದಕ್ಕಾಗಿ ಸರ್ಕಾರವು ಸಮುದ್ರ ಬದಿಯಲ್ಲಿ ಬೃಹತ್ ಆಕಾರದ ಬಂಡೆಗಲ್ಲುಗಳನ್ನು ಹಾಕಿ ತಡೆಗೋಡೆ ನಿರ್ಮಿಸಿ ಅಲೆಗಳ ಅಬ್ಬರವನ್ನು ತಡೆಯಲು ಪ್ರಯತ್ನಿಸಿತ್ತು.