ಬಂಟ್ವಾಳ: ತಾಲೂಕಿನಲ್ಲಿ ಗ್ರಾಪಂ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆಯೇ ಅಲ್ಲಲ್ಲಿ ಚುನಾವಣಾ ಬಹಿಷ್ಕಾರದ ಧ್ವನಿಗಳು ಕೇಳತೊಡಗಿವೆ. ಮತ ಕೇಳಲು ಮನೆಗೆ ಬರಬೇಡಿ ಎಂಬ ಪೋಸ್ಟರ್ಗಳನ್ನು ಸಾರ್ವಜನಿಕರು ಮನೆ ಮುಂದೆ ಅಂಟಿಸುತ್ತಿದ್ದಾರೆ.
ತಾಲೂಕಿನ ಕಾವಳಪಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ವಗ್ಗದ ಒಂದು ಭಾಗದಲ್ಲಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ ಕೈಗೊಂಡಿದ್ದಾರೆ. ತಡೆಗೋಡೆ ವಿಷಯದಲ್ಲಿ ಭರವಸೆಗಳನ್ನಷ್ಟೇ ಮುಖಂಡರು ನೀಡಿದ್ದು, ಯಾವ ಕೆಲಸವೂ ಆಗಿಲ್ಲ ಎಂದು ಆರೋಪಿಸಿ ಮತ ಕೇಳಲು ಮನೆ ಬಾಗಿಲಿಗೆ ಬರಬೇಡಿ. ದಾರಿಗಾಗಿ ಚುನಾವಣೆ ಬಹಿಷ್ಕಾರ ಎಂಬ ಭಿತ್ತಿಪತ್ರವನ್ನು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ ಕೇಳಲು ಮನೆ ಬಾಗಿಲಿಗೆ ಬರಬೇಡಿ ಎಂಬ ಭಿತ್ತಿಪತ್ರ ನಂದಾವರ ಬಳಿಯಲ್ಲೂ ಮತ ಬಹಿಷ್ಕಾರದ ಬ್ಯಾನರ್ ಒಂದು ಕೆಲ ದಿನಗಳ ಹಿಂದೆ ಕಂಡುಬಂದು ಸುದ್ದಿ ಮಾಡಿತ್ತು. ವಿಟ್ಲ ಸಮೀಪ ನಾಲ್ಕು ಗ್ರಾಪಂ ವ್ಯಾಪ್ತಿಯ ಕೆಲವೆಡೆ ಸಮರ್ಪಕ ರಸ್ತೆ ವ್ಯವಸ್ಥೆ ಕಲ್ಪಿಸದ ಹಾಗೂ ಸರ್ಕಾರಿ ರಸ್ತೆ ಅತಿಕ್ರಮಣ ಮೊದಲಾದ ಸಮಸ್ಯೆಗಳನ್ನು ಈಡೇರಿಸದ ಹಿನ್ನೆಲೆ ಚುನಾವಣೆ ಬಹಿಷ್ಕಾರಿಸಲಾಗಿದೆ ಎಂದು ದ.ಕ ಜಿಲ್ಲಾ ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಕುಳ ಗ್ರಾಮದ ಅಡ್ಯಾಲು, ಮಾಣಿಲ ಗ್ರಾಮದ ಕನ್ನಡಗುಳಿ ಕುಟೇಲು, ಪಜೀರು ಗ್ರಾಮ, ಕೇಪು ಗ್ರಾಮದ ಅಜ್ಜಿನಡ್ಕದಲ್ಲಿ ಈ ರೀತಿ ಚುನಾವಣಾ ಬಹಿಷ್ಕಾರ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.