ಮಂಗಳೂರು:ಪಿಕಪ್ ವಾಹನವೊಂದು ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾ ಹೋಗಿದ್ದು, ಇದರಿಂದ ಆಕ್ರೋಶಿತರಾದ ವಾಹನ ಸವಾರರು ವಾಹನವನ್ನು ಬೆನ್ನಟ್ಟಿ ಚಾಲಕ, ನಿರ್ವಾಹಕನಿಗೆ ಧರ್ಮದೇಟು ನೀಡಿದ್ದಾರೆ. ಮುಲ್ಕಿ-ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಹೊಸ ಕಾವೇರಿ ಬಳಿ ಘಟನೆ ನಡೆದಿದೆ.
ಪಿಕಪ್ ವಾಹನ ರಸ್ತೆಯಲ್ಲಿ ಸಂಚರಿಸುವಾಗ ಹಲವು ವಾಹನಗಳಿಗೆ ಗುದ್ದಿದೆ ಎನ್ನಲಾಗ್ತಿದೆ. ಇದರಿಂದ ಆಕ್ರೋಶಿತರಾದ ಸಾರ್ವಜನಿಕರು ವಾಹನವನ್ನು ರಸ್ತೆಯಲ್ಲಿಯೇ ತಡೆದು ನಿಲ್ಲಿಸಿ, ಚಾಲಕ, ನಿರ್ವಾಹಕನಿಗೆ ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಗುರುವಾರ ರಾತ್ರಿ 9.30ರ ವೇಳೆಗೆ ಘಟನೆ ನಡೆದಿದೆ. ಬಜ್ಪೆಯಿಂದ ಆಗಮಿಸಿದ್ದ ಪಿಕಪ್ ವಾಹನ ದಾರಿ ಮಧ್ಯೆ ಹಲವು ಬೈಕ್, ಕಾರು, ಬಸ್ಗಳಿಗೆ ಡಿಕ್ಕಿ ಹೊಡೆದಿದೆ. ಬಜ್ಪೆ ಚೆಕ್ ಪೋಸ್ಟ್ ಬಳಿ 3 ಬೈಕ್ಗಳಿಗೆ ಗುದ್ದಿದೆ ಎನ್ನಲಾಗ್ತಿದೆ. ಇದರಿಂದ ಕೋಪಗೊಂಡ ಜನರು ಸುಮಾರು ಹತ್ತು ಬೈಕ್ಗಳಲ್ಲಿ ಬೆನ್ನಟ್ಟಿ ಬಂದಿದ್ದಾರೆ. ಸುಮಾರು 12 ಕಿಲೋ ಮೀಟರ್ ಕ್ರಮಿಸಿದ ನಂತರ ತಡೆದು ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ.
ಇದನ್ನೂ ಓದಿ:ಆ್ಯಂಬುಲೆನ್ಸ್ ನಿರಾಕರಿಸಿದ ಆಸ್ಪತ್ರೆ: ಸೈಕಲ್ ರಿಕ್ಷಾ ಮೇಲೆಯೇ ಮೃತದೇಹ ಸಾಗಿಸಿದ ಕುಟುಂಬ!
ಪಿಕಪ್ ವಾಹನದಿಂದ ಅದರಲ್ಲಿದ್ದವರನ್ನು ಹೊರಗೆಳೆದು ಹಲ್ಲೆ ನಡೆಸಲಾಗಿದೆ. ಚಾಲಕ, ನಿರ್ವಾಹಕರಿಬ್ಬರೂ ಗಾಂಜಾ ನಶೆಯಲ್ಲಿದ್ದರು ಎಂಬ ಆರೋಪವಿದೆ. ಆಕ್ರೋಶಿತರು ಹಲ್ಲೆ ನಡೆಸುವ ವೇಳೆ ಚಾಲಕ ಹಿಂದೂವಿನ ಹೆಸರು ಹೇಳಿದ್ದಾನೆ ಎನ್ನಲಾಗ್ತಿದ್ದು, ಡ್ರೈವಿಂಗ್ ಲೈಸೆನ್ಸ್ ಪರಿಶೀಲನೆ ವೇಳೆ ಅನ್ಯಕೋಮಿನ ಹೆಸರು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.