ಮಂಗಳೂರು:ಕಾಂಗ್ರೆಸ್ ಪಕ್ಷವು ಚುನಾವಣೆಗೆ ಘೋಷಿಸಿರುವ ಗ್ಯಾರಂಟಿಯನ್ನು ಕಾರ್ಡ್ ರೂಪದಲ್ಲಿ ಜನತೆಗೆ ನೀಡುತ್ತಿದೆ. ಅದಕ್ಕೆ ಮೌಲ್ಯವಿಲ್ಲ. ಪುಕ್ಕಟ್ಟೆ ಕಾರ್ಡ್ ಆಗಿರುವ ಅದು ವಿಸಿಟಿಂಗ್ ಕಾರ್ಡ್ಗೆ ಸಮ. ವಿಸಿಟಿಂಗ್ ಕಾರ್ಡನ್ನು ಡಸ್ಟ್ ಬಿನ್ಗೆ ಎಸೆಯುವಂತೆ ಜನರು ಇದನ್ನು ಎಸೆಯುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಫಲಾನುಭವಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಗಲಾರದನ್ನು ಹೇಳಿ ಆಸೆ ಹುಟ್ಟಿಸುತ್ತಿದೆ. ತುಪ್ಪದ ವಾಸನೆಯನ್ನು ದೂರದಿಂದ ತೋರಿಸುತ್ತಿದ್ದಾರೆ. ಪ್ರತಿ ಮನೆಗೆ 2 ಸಾವಿರ ರೂ. ನೀಡುವ ಭರವಸೆ ನೀಡಿದ್ದಾರೆ. 2 ಕೋಟಿ ಜನರಿಗೆ 24 ಸಾವಿರ ಕೋಟಿ ಆಗುತ್ತದೆ. ಅದನ್ನು ಕೊಟ್ಟರೆ ಈಗಿನ ಯೋಜನೆ ಬಂದ್ ಆಗುತ್ತದೆ. ಅವರಿಗೆ ಕೊಡಲು ಆಗುವುದಿಲ್ಲ ಎಂದು ತಿಳಿಸಿದರು.
ಜನರಿಗೆ ಮೋಸ ಮಾಡಲು ಸಾಧ್ಯವಿಲ್ಲ:ಇನ್ನು 200 ಯುನಿಟ್ ಉಚಿತ ವಿದ್ಯುತ್ ಕೊಡುವ ಭರವಸೆ ನೀಡಿದ್ದಾರೆ. ಜನರು ಉಪಯೋಗಿಸುವುದು 75 ರಿಂದ 80 ಯುನಿಟ್. 120 ಯುನಿಟ್ ಬಗ್ಗೆ ಜನರಿಗೆ ಯಾಮಾರಿಸುತ್ತಿದ್ದಾರೆ. 10 ಕೆಜಿ ಅಕ್ಕಿ ನೀಡುವುದನ್ನು ಚುನಾವಣೆಗೋಸ್ಕರ ಪ್ರಸ್ತಾಪಿಸಿದ್ದಾರೆ. ಜನರನ್ನು ಕೆಲ ಸಂದರ್ಭದಲ್ಲಿ ಮೋಸ ಮಾಡಬಹುದು. ಎಲ್ಲಾ ಸಂದರ್ಭದಲ್ಲೂ ಮೋಸ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಯುಪಿಎ ಕಾಲದಲ್ಲಿ ಯೋಜನೆಯ ಶೇ.85ರಷ್ಟು ಮಧ್ಯವರ್ತಿಗಳ ಪಾಲಾಗುತ್ತಿತ್ತು -ಸಿಎಂ: ಕೇಂದ್ರ ಸರ್ಕಾರ ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿ ಮಾಡಿದೆ. ಮೋದಿ ಪ್ರಧಾನಿಯಾಗಿ ಬರುವುದಕ್ಕಿಂತ ಮೊದಲು ಈ ಯೋಜನೆ ಇರಲಿಲ್ಲ. ಯುಪಿಎ ಸರ್ಕಾರ ಮಾಡಿದ್ದರೆ ದೊಡ್ಡ ದೊಡ್ಡ ಬ್ಯಾನರ್ಗಳನ್ನು ಹಾಕುತ್ತಿದ್ದರು. ರಾಜೀವ್ ಗಾಂಧಿಯವರು 1 ರೂಪಾಯಿ ನೀಡಿದರೆ 15 ಪೈಸೆ ಜನರಿಗೆ ತಲುಪುತ್ತದೆ ಎಂದು ಹೇಳಿದ್ದರು. ಯುಪಿಎ ಸರ್ಕಾರದ ಕಾಲದಲ್ಲಿ ಶೇ.85ರಷ್ಟು ಮಧ್ಯವರ್ತಿಗಳ ಪಾಲಾಗುತಿತ್ತು. ಯುಪಿಎ ಕಾಲದಲ್ಲಿ ಶೇ.85ರಷ್ಟು ಸರ್ಕಾರ ನಡೆಯುತಿತ್ತು. ಈಗ ಮಧ್ಯವರ್ತಿಗಳೇ ಇಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ಅನುದಾನ ಹೋಗುತ್ತಿದೆ ಎಂದರು.
ಫಲಾನುಭವಿ ಸಭೆಯಲ್ಲೇ ರಬ್ಬರ್ ಪ್ಲ್ಯಾಂಟೇಷನ್ ನೌಕರರಿಗೆ ಶೇ. 20ರಷ್ಟು ಬೋನಸ್ ಘೋಷಣೆ ಮಾಡಿದ ಸಿಎಂ, ರಬ್ಬರ್ ಪ್ಲ್ಯಾಂಟೇಷನ್ ಟ್ಯಾಪರ್ಗಳಿಗೆ ನೀಡುವ ಬೋನಸ್ ಅನ್ನು ಶೇ.12 ಹೆಚ್ಚುವರಿ ಮಾಡಿ ಒಟ್ಟು ಶೇ. 20ರಷ್ಟು ಬೋನಸ್ ಅನ್ನು ಇಂದು ಮಂಗಳೂರಿನಲ್ಲಿ ನಡೆದ ಫಲಾನುಭವಿಗಳ ಸಭೆಯಲ್ಲಿಯೇ ಮುಖ್ಯಮಂತ್ರಿಗಳು ಘೋಷಣೆ ಮಾಡಿದರು.