ಮಂಗಳೂರು: ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವತಿಯೋರ್ವಳು ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ನಗರದ ಹೊರವಲಯದ ಕುಳಾಯಿ ಸಮೀಪ ನಡೆದಿದೆ.
ಅಪಘಾತದ ಭೀಕರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮೂಲತಃ ಕೃಷ್ಣಾಪುರ ಚೊಕ್ಕಬೆಟ್ಟು ನಿವಾಸಿ, ಪ್ರಸ್ತುತ ನಗರದ ಬೋಂದೆಲ್‌ನಲ್ಲಿ ವಾಸವಾಗಿದ್ದ ಸುಹಾನಾ (26) ಮೃತಪಟ್ಟವರಾಗಿದ್ದಾರೆ. ಕಾರಿನಲ್ಲಿದ್ದ ಸುಹಾನಾರ ಸಹೋದರಿ ಫಾತಿಮಾ ಶೌರೀನ್, ಸಹೋದರರಾದ ರಾಹಿಲ್ ಶಮೀಮ್ ಮತ್ತು ರಾಝಿಕ್ ಶಹಾನ್ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಮದುವೆ ಕಾರ್ಯಕ್ರಮಕ್ಕೆ ತೆರಳಲು ಸಿದ್ಧತೆಯಲ್ಲಿದ್ದ ಇವರು ನಗರಕ್ಕೆ ಆಗಮಿಸಿ ಆಹಾರ ಪಾರ್ಸೆಲ್ ಕಟ್ಟಿಸಿಕೊಂಡು ಕೃಷ್ಣಾಪುರ ಚೊಕ್ಕಬೆಟ್ಟುವಿಗೆ ತೆರಳುತ್ತಿದ್ದರು. ಈ ಸಂದರ್ಭ ಕುಳಾಯಿ ಸಮೀಪ ಬರುತ್ತಿದ್ದಾಗ ಕಾರು ಚಲಾಯಿಸುತ್ತಿದ್ದ ರಾಹಿಲ್ ಶಮೀಮ್‌ಗೆ ವಿರುದ್ಧ ದಿಕ್ಕಿನಲ್ಲಿ ಮತ್ತೊಂದು ಕಾರು ಬಂದಂತಾಗಿ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನ ನಡೆಸಿದಾಗ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದು, ಇವರಲ್ಲಿ ಸುಹಾನಾ ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ 1:33ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಮೃತ ಸುಹಾನಾ ಅವರು ಪತಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಓದಿ:'ಅಯೋಧ್ಯೆಯಲ್ಲಿ ಮಸೀದಿಗೆ ನೀಡಿರುವ ಭೂಮಿ ನಮ್ಮದು': ಕೋರ್ಟ್ ಮೆಟ್ಟಿಲೇರಿದ ರಾಣಿಯರು!
ಈ ಬಗ್ಗೆ ಮುಹಮ್ಮದ್ ರಿಯಾಝ್ ನೀಡಿದ ದೂರಿನಂತೆ ಸಂಚಾರ ಉತ್ತರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.