ಕಡಬ (ದಕ್ಷಿಣ ಕನ್ನಡ): ತಾಲೂಕಿನ ಕಡ್ಯ ಕೊಣಾಜೆ ಗ್ರಾಮದ ಪುತ್ತಿಗೆ ಪರಿಸರದಲ್ಲಿ ಹಾರಾಟ ನಡೆಸಿದ್ದ ಡ್ರೋನ್ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ್ದು, ಸರ್ವೇ ಕಾರ್ಯ ಮಾಡಲಾಗುತ್ತಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಕೊಣಾಜೆ, ನೂಜಿಬಾಳ್ತಿಲ, ಕಲ್ಲುಗುಡ್ಡೆ, ಪುತ್ತಿಗೆ ಪರಿಸರದಲ್ಲಿ ಶುಕ್ರವಾರ ಸಂಜೆ ವೇಳೆಗೆ ಡ್ರೋನ್ವೊಂದು ಹಾರಾಟ ನಡೆಸುತ್ತಿರುವುದನ್ನು ಸ್ಥಳೀಯರು ನೋಡಿ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಕುರಿತು ಗ್ರಾಮ ಪಂಚಾಯತ್ಗೂ ಮಾಹಿತಿ ತಿಳಿದಿರಲಿಲ್ಲ. ಇದೀಗ, ಡ್ರೋನ್ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಹಳೆಯ ಡ್ಯಾಂಗಳ ನೀರಿನ ಶೇಖರಣಾ ಸಾಮಾರ್ಥ್ಯದ ಬಗ್ಗೆ ತಿಳಿಯಲು ಡ್ರೋನ್ ಸರ್ವೇ ನಡೆಸಲಾಗಿದೆ ಎನ್ನಲಾಗಿದೆ. ಎಲ್ಲೆಲ್ಲಿ ನದಿಗಳಿಗೆ ಡ್ಯಾಂ ಕಟ್ಟಲಾಗಿದೆ, ಅಲ್ಲಿನ ನೀರಿನ ಶೇಖರಣಾ ಸಾಮಾರ್ಥ್ಯದ ಬಗ್ಗೆ ತಿಳಿಯಲು ಈ ಡ್ರೋನ್ ಬಳಸಿ ಸರ್ವೇ ನಡೆಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಮಾನವರನ್ನು ಹೊತ್ತೊಯ್ಯಬಲ್ಲ ಮೊದಲ ಸ್ವದೇಶಿ ಡ್ರೋನ್ 'ವರುಣಾ': ವಿಡಿಯೋ
ಸಾಮಾನ್ಯವಾಗಿ ಸಿನಿಮಾ, ಮದುವೆ ಛಾಯಾಗ್ರಹಣಕ್ಕೆ ಸೀಮಿತವಾಗಿದ್ದ ಡ್ರೋನ್‌ಗಳನ್ನು ಕೃಷಿ, ನಗರಾಭಿವೃದ್ಧಿ, ಪೊಲೀಸ್, ಸೇನಾ ಕಾರ್ಯಾಚರಣೆಯಂತಹ ಜನಪರ ಕಾರ್ಯಗಳಿಗೂ ಇತ್ತೀಚೆಗೆ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ನೀತಿಯನ್ನ ಪ್ರಕಟಿಸಿತ್ತು. ಹೊಸ ನಿಯಮಾವಳಿಗಳ ಅನ್ವಯ ಮನರಂಜನೆ, ಮದುವೆ ಮುಂತಾದ ಛಾಯಾಗ್ರಹಣಕ್ಕೆ ಬಳಸಲಾಗುವ ಪುಟ್ಟ ಡ್ರೋನ್‌ಗಳಿಗೂ ವಿಶೇಷ ಗುರುತಿನ ಸಂಖ್ಯೆ (ಯುಐಎನ್) ಪಡೆಯುವುದು ಕಡ್ಡಾಯವಾಗಿದೆ. ಈ ಭಾಗದಲ್ಲಿ ಹಾರಾಟ ನಡೆಸಿರುವ ಡ್ರೋನ್ ಬಗ್ಗೆ ಪೊಲೀಸರಿಗೂ ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗಿದೆ.