ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿಯವರು ಲಾಕ್‌ಡೌನ್ ಅವಧಿಯಲ್ಲಿ ತುಳು ಲಿಪಿಯನ್ನು ಪೂರ್ಣವಾಗಿ ಕಲಿತು ಅದರಲ್ಲೇ ತುಳಸೀದಾಸರ ಹನುಮಾನ್ ಚಾಲೀಸಾವನ್ನು ನೇರವಾಗಿ ಅನುವಾದಿಸಿ ಗಮನ ಸೆಳೆದಿದ್ದಾರೆ.
ದಕ್ಷಿಣದ ಗಾಣಗಾಪುರ ಎಂದು ಗುರುತಿಸಲ್ಪಟ್ಟ ಬಂಟ್ವಾಳ ತಾಲೂಕಿನ ಒಡಿಯೂರಿನಲ್ಲಿರುವ ಶ್ರೀಗುರುದೇವದತ್ತ ಸಂಸ್ಥಾನಮ್ನ ಶ್ರೀಗುರುದೇವಾನಂದ ಸ್ವಾಮೀಜಿ ಪ್ರತಿ ವರ್ಷ ತುಳು ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ವಿದ್ವಾಂಸರನ್ನು ಕರೆಸಿ ಚರ್ಚಾಗೋಷ್ಠಿಗಳನ್ನು ಏರ್ಪಡಿಸುತ್ತಾರೆ. ತುಳು ಭಾಷೆ, ಸಾಹಿತ್ಯ, ಸಂಸ್ಕ್ರತಿಯ ಉಳಿವಿಗಾಗಿ ಕೇರಳ-ಕರ್ನಾಟಕದ ಗಡಿ ಹಾಗೂ ಅವಿಭಜಿತ ಜಿಲ್ಲೆಯಲ್ಲಿ ಹತ್ತು-ಹಲವು ಕಾರ್ಯಕ್ರಮಗಳನ್ನು ಸಂಘಟಿಸಿ ತುಳು ಬೆಳವಣಿಗೆಗೆ ಹೆಗಲು ಕೊಟ್ಟವರು.
ಕಳೆದ ಬಾರಿಯ ಲಾಕ್‌ಡೌನ್ ಸಮಯದಲ್ಲಿ ತುಳು ಲಿಪಿ ಅಧ್ಯಯನ ಆರಂಭಿಸಿದರು. ಭಾಷೆಯ ಬೆಳವಣಿಗೆಗೆ ಬಲ ತುಂಬುವ ಲಿಪಿಯ ಬಗ್ಗೆ ಆಸಕ್ತರಾಗಿ ತುಳುಲಿಪಿಯ ಪ್ರತಿ ಬೀಜಾಕ್ಷರಗಳನ್ನು ಬರೆಯಲು ಕಲಿತರು. ಮಾರ್ಚ್ನಿಂದ ಜುಲೈ ತನಕ ಲಿಪಿಯನ್ನು ಕಲಿತು, ಲಿಪಿ ಮೂಲಕ ಲೀಲಾಜಾಲವಾಗಿ ಬರೆಯುವುದನ್ನು ಕಲಿತರು.