ಮಂಗಳೂರು: ನವರಾತ್ರಿ ಆಚರಣೆಯ ವೇಳೆ ಮಂಗಳೂರಿನ ಶಾರದೆಗೆ ತೊಡಿಸಲು ವಾರಾಣಸಿಯ ನೂರುಲ್ಲಾ ಅಮೀನ್ ಅವರು ತಯಾರಿಸಿದ ಸೀರೆಯೊಂದು ಸಿದ್ದವಾಗಿದೆ.
ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನ ಆಚಾರ್ಯ ಮಠ ವಠಾರದಲ್ಲಿ ನಡೆಯುವ ಶಾರಾದೋತ್ಸವಕ್ಕೆ ಈ ಬಾರಿ ನೂರನೇ ವರುಷ ತುಂಬುತ್ತಿದೆ. ಶತಮಾನೋತ್ಸವ ಆಚರಣೆಯ ಶಾರದೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ದತೆಗಳು ನಡೆಯುತ್ತಿದೆ. ಈ ಶಾರದೋತ್ಸವದಲ್ಲಿ ಕೊನೆಯ ದಿನ ಶಾರದೆಗೆ ತೊಡಿಸಲಾಗುವ ಸೀರೆ ಈ ಬಾರಿ ವಿಶೇಷ ಕಾರಣಕ್ಕೆ ಸುದ್ದಿಯಾಗಿದೆ. ಮಂಗಳೂರಿನ ಈ ಶಾರದೆಗೆ ಮಂಗಳೂರಿನ ಕುಲ್ಯಾಡಿಕರ್ ನೂತನ್ ಸಿಲ್ಕ್ ಮಾಲೀಕ ಸುಧೀರ್ ಪೈ ಪ್ರತಿ ವರ್ಷ ಸೀರೆಯನ್ನು ಕೊಡುಗೆಯಾಗಿ ನೀಡುತ್ತಾರೆ.
ಸುಧೀರ್ ಪೈ ಅವರ ತಾಯಿ ಅವರು 1988 ರಲ್ಲಿ ನಿಧನರಾಗಿದ್ದು, ಅವರ ನೆನಪಿಗೆ ಅಂದಿನಿಂದ ಪ್ರತಿ ವರ್ಷ ಶಾರದೆಗೆ ಇವರು ಸೀರೆಯನ್ನು ನೀಡುತ್ತಾರೆ. ಈ ಬಾರಿ ಶತಮಾನೋತ್ಸವವಾಗಿರುವುದರಿಂದ ಈ ಬಾರಿ ನೀಡಲಾಗುವ ಸೀರೆಯನ್ನು ಬಂಗಾರದ ಲೇಪನದೊಂದಿಗೆ ನೀಡಲಾಗಿದೆ. ಕಡುಹಸಿರು ಬಣ್ಣದ ಈ ಬನಾರಸ್ ಸೀರೆಗೆ ಬಂಗಾರದಿಂದ ಡಿಸೈನ್ ಮಾಡಲಾಗಿದೆ. ಸೀರೆಯ ಮೇಲೆ ಸುಮಾರು 2600 ಹೂವುಗಳ ಚಿತ್ರವನ್ನು ಬಂಗಾರದಿಂದ ಮಾಡಲಾಗಿದೆ.