ಮಂಗಳೂರು:ಕೇರಳದಲ್ಲಿ ನಿಫಾ ವೈರಸ್ ಪತ್ತೆ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಜಿಲ್ಲೆಯಾಗಿರುವ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುದರ್ಶನ್ ಅವರು ನಿಫಾ ವೈರಸ್ ಪತ್ತೆಯಾದ ಕಾರಣ ದ.ಕನ್ನಡ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್ ತೆರೆಯಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಫಾ ವೈರಸ್ ಪ್ರಕರಣ ಈವರೆಗೆ ಪತ್ತೆಯಾಗಿಲ್ಲ. ಈ ಹಿಂದೆ ಕೇರಳದಲ್ಲಿ ಎರಡು ಬಾರಿ ನಿಫಾ ವೈರಸ್ ಪತ್ತೆಯಾದಾಗಲೂ ನಮ್ಮ ಜಿಲ್ಲೆಯಲ್ಲಿ ನಿಗಾ ವಹಿಸಲಾಗಿತ್ತು. ಆದರೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಸದ್ಯ ಜಿಲ್ಲೆಯಲ್ಲಿ ಜ್ವರ ಸಮೀಕ್ಷೆ ಮಾಡಲಾಗಿದೆ. ಜಿಲ್ಲೆಯ ಗಡಿಭಾಗದಲ್ಲಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಯು ವಾಟ್ಸಪ್ ಗ್ರೂಪ್ ಮಾಡಿ ನಿಗಾವಹಿಸಿದ್ದಾರೆ ಎಂದರು.
ನಿಫಾ ವೈರಸ್ಗೆ ನಿರ್ದಿಷ್ಟ ಔಷಧಿಯಿಲ್ಲ. ಆದರೆ ರೋಗಿಗೆ ಕಂಡುಬರುವ ರೋಗದ ಲಕ್ಷಣಗಳಿಗೆ ಔಷಧಿ ನೀಡಲಾಗುತ್ತದೆ. ಈ ರೋಗದ ಪತ್ತೆಗೆ ಅಗತ್ಯ ಇರುವವರ ರಕ್ತ ಪರೀಕ್ಷೆಯನ್ನು ಪುಣೆಗೆ ಕಳುಹಿಸಲಾಗುತ್ತದೆ. 48 ಗಂಟೆಗಳ ಅವಧಿಯಲ್ಲಿ ರಿಪೋರ್ಟ್ ಕೈಸೇರುತ್ತದೆ. ಈ ರೋಗಿಗೆ ರೋಗ ಲಕ್ಷಣದ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ. ಈ ರೋಗದಲ್ಲಿ 60% ಮರಣ ಪ್ರಮಾಣ ಇದೆ ಎಂದು ಮಾಹಿತಿ ನೀಡಿದರು. ಮಾಧ್ಯಮಗೋಷ್ಟಿಯಲ್ಲಿ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ನವೀನ್ ಚಂದ್ರ ಇದ್ದರು.
ನಿಫಾ ವೈರಾಣು ಜ್ವರ ಎಂದರೇನು:ಇದೊಂದು ವೈರಾಣು ಸೋಂಕಾಗಿದ್ದು, ನಿಫಾ ಎನ್ಸಫಲೈಟಿಸ್ ಎಂದು ಹೆಸರಿಸಲಾಗಿದೆ. 1998ರಲ್ಲಿ ಮಲೇಷಿಯಾ ಮತ್ತು ಸಿಂಗಾಪುರ ದೇಶಗಳಲ್ಲಿ ಮೊದಲ ಬಾರಿಗೆ ಕಂಡುಬಂದಿತ್ತು. ಮಲೇಷಿಯಾದ ನಿಫಾ ಎಂಬ ಗ್ರಾಮದಲ್ಲಿ ಈ ವೈರಾಣು ಪತ್ತೆ ಹಚ್ಚಿದ್ದರಿಂದ ಇದಕ್ಕೆ ನಿಫಾ ವೈರಾಣು ಎಂದು ಹೆಸರಿಡಲಾಗಿದೆ. ಈ ಜ್ವರವು ಬಾವಲಿ, ಹಂದಿ, ನಾಯಿ, ಕುರಿ, ಬೆಕ್ಕು ಹಾಗೂ ಮನುಷ್ಯರಿಗೆ ಬಾಧಿಸುತ್ತದೆ. ಇದು ಮಲೇಷಿಯಾ, ಸಿಂಗಾಪುರ, ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಿಸಿಕೊಂಡಿದೆ.
ರೋಗ ಲಕ್ಷಣಗಳು : ಮನುಷ್ಯರಲ್ಲಿ- ಜ್ವರ, ತಲೆನೋವು, ತಲೆಸುತ್ತುವಿಕೆ, ದಿಗ್ಬ್ರಮೆ, ಮಾನಸಿಕ ಗೊಂದಲ, ಜ್ಞಾನ ತಪ್ಪುವುದು, ಅಲ್ಲದೆ ನಂತರ ಸಾವು ಸಂಭವಿಸಬಹುದು.
ಪ್ರಾಣಿಗಳಲ್ಲಿ -ಹಂದಿಗಳಲ್ಲಿ ಉಸಿರಾಟದ ತೊಂದರೆ, ನರದೌರ್ಬಲ್ಯ (ನರಮಂಡಲದ ಸಿಂಡ್ರೋಮ್)
ವೈರಸ್ ಹರಡುವಿಕೆ ಹೇಗೆ?:
- ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಹಾಗೂ ಬಾವಲಿಗಳು ಬಿಸಾಡಿದ ಹಣ್ಣು ಹಂಪಲುಗಳನ್ನು ಸೇವಿಸುವುದರ ಮೂಲಕ ಇತರ ಪ್ರಾಣಿಗಳಿಗೆ ಹರಡುತ್ತದೆ.
- ಸೋಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಮಲ- ಮೂತ್ರ, ಜೊಲ್ಲು ಮತ್ತು ರಕ್ತದ ನೇರ ಸಂಪರ್ಕದಿಂದ ಹರಡುತ್ತದೆ.
- ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸುವುದರಿಂದ ಮನುಷ್ಯರಿಗೆ ಹರಡುತ್ತದೆ.
- ಸೋಂಕಿತ ಪ್ರಾಣಿಯ ಮಲ, ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಮನುಷ್ಯರಿಗೆ ಹರಡಲಿದೆ.
ಪತ್ತೆ ಹಚ್ಚುವುದು ಹೇಗೆ?
- ಎಲೀಸಾ ಆಧಾರಿತ ರಕ್ತ ಪರೀಕ್ಷೆಯಿಂದ ನಿಫಾ ವೈರಾಣು ಗುರುತಿಸಬಹುದು.
- ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯಿಂದ ಈ ರೋಗವನ್ನು ದೃಢಪಡಿಸಲಾಗುತ್ತದೆ.