ಮಂಗಳೂರು:ರಾಜ್ಯ ಸರ್ಕಾರವು ನೂತನ ಮರಳು ನೀತಿ ಜಾರಿಗೆ ತರಲಿದ್ದು, ಕರಾವಳಿಗೆ ಪ್ರತ್ಯೇಕ ನೀತಿ ರೂಪಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಮರಳು ನೀತಿ ಬಗ್ಗೆ ತಜ್ಞರು ಜೊತೆ ಚರ್ಚಿಸಿ ಕರಡು ರೂಪಿಸಲಾಗುವುದು. ಕರಾವಳಿಯ ಶಾಸಕರು, ತಜ್ಞರ ಜೊತೆ ಸೇರಿ ಸಾರ್ವಜನಿಕರ ಸಲಹೆ ಸ್ವೀಕರಿಸಲಾಗುವುದು. 10 ಲಕ್ಷ ರೂ.ಗಿಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗುವ ಮನೆಗಳಿಗೆ ಒಂದು ಟನ್ಗೆ 100 ರೂ. ದರದಲ್ಲಿ ಸ್ಥಳೀಯ ಮರಳು ಮತ್ತು 10 ಲಕ್ಷ ಮೇಲ್ಪಟ್ಟ ಕಾಮಗಾರಿಗಳಿಗೆ ನಿಗದಿಪಡಿಸಿದ ರಾಜಸ್ವ ಪಡೆಯಲಾಗುವುದು ಎಂದು ಹೇಳಿದರು.
ಮರಳು ಸಾಗಾಟ ವಾಹನಗಳಿಗೆ ಜಿಪಿಎಸ್ ಅಳವಡಿಸುವುದು, ಏಕಗವಾಕ್ಷಿ ಮೂಲಕ ಗಣಿಗಾರಿಕೆ ಪರವಾನಿಗೆ ನೀಡುವುದು, ಗಣಿಗಾರಿಕೆ ಸಿಬ್ಬಂದಿಗೆ ಪೊಲೀಸ್, ಅರಣ್ಯ ಇಲಾಖೆಯಂತೆ ಯೂನಿಫಾರ್ಮ್ ವ್ಯವಸ್ಥೆ ಮಾಡಲಾಗುವುದು ಎಂದರು.