ಕರ್ನಾಟಕ

karnataka

ETV Bharat / state

ಅರುಣ್ ಕುಮಾರ್ ಪುತ್ತಿಲ ರಿಂದ ಪುತ್ತಿಲ ಪರಿವಾರ ಎಂಬ ಹೊಸ ಸಂಘಟನೆ ಲೋಕಾರ್ಪಣೆ .. - A new organization Puttila Parivar

ಅರುಣ್ ಕುಮಾರ್ ಪುತ್ತಿಲ ತಮ್ಮ ಬೆಂಬಲಿಗರೊಂದಿಗೆ ದರ್ಬೆಯಿಂದ ದೇವರಮಾರು ಗದ್ದೆಯವರೆಗೆ ಮಹಾಲಿಂಗೇಶ್ವರನ ಕಾಲ್ನಡಿಗೆ ಜಾಥಾ ನಡೆಸಿದ್ದಾರೆ.

new-organization-puttila-parivar-by-arun-kumar-puttila
ಅರುಣ್ ಕುಮಾರ್ ಪುತ್ತಿಲ ರಿಂದ ಪುತ್ತಿಲ ಪರಿವಾರ ಎಂಬ ಹೊಸ ಸಂಘಟನೆ ಲೋಕಾರ್ಪಣೆ ..

By

Published : May 22, 2023, 5:54 PM IST

ಪುತ್ತೂರು(ದಕ್ಷಿಣ ಕನ್ನಡ):ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗರೊಂದಿಗೆ, ನಮ್ಮ ನಡಿಗೆ ಶ್ರೀ ಮಹಾಲಿಂಗೇಶ್ವರನ ಕಡೆಗೆ ಎಂಬ ಬೃಹತ್ ಪಾದಯಾತ್ರೆ ಹಾಗೂ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರ ಮಾರುಗದ್ದೆಯಲ್ಲಿ ಸೇವಾ ಸಮರ್ಪಣಾ ಕಾರ್ಯಕ್ರಮ ನಡೆಸಿದರು. ಈ ವೇಳೆ ಪುತ್ತಿಲ ಪರಿವಾರ ಎಂಬ ಹೊಸ ಸಂಘಟನೆ ಲೋಕಾರ್ಪಣೆ ಮಾಡಲಾಯಿತು.

ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಕ್ಷದ ಕಡೆಯಿಂದ ಪ್ರಧಾನಿಯಾಗಿ ಆಯ್ಕೆ ಮಾಡಿಲ್ಲ. ಬದಲಿಗೆ ದೇಶದ ಅಸಂಖ್ಯಾತ ಧ್ವನಿಗಳ ಕಾರಣದಿಂದ ಪ್ರಧಾನಿಯಾದರು. ಬಡ ಜನರ ಸೇವೆ ಮಾಡಿದಾಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಎಲ್ಲದಕ್ಕೂ ದೈವಬಲ ಕಾರಣವಾಗಿದೆ. ಅದೇ ರೀತಿ ದೈವ ಬಲ ಇರುವ ಕಾರಣಕ್ಕೆ ಪುತ್ತಿಲ ಅವರಿಗೆ ಈ ರೀತಿಯಾದ ಜನರ ಪ್ರೀತಿ ಬೆಂಬಲ ಸಿಕ್ಕಿದೆ ಎಂದು ಹೇಳಿದರು.

ಇದೆಲ್ಲ ಶ್ರೀ ಮಹಾಲಿಂಗೇಶ್ವರನ ಸಂಕಲ್ಪ, ಅಭ್ಯರ್ಥಿಗಳು ಹಣ ಹಂಚುವ ದಿನದಲ್ಲಿ ಮತದಾರರೇ ಹಣ ನೀಡಿ ಪುತ್ತಿಲ ಅವರನ್ನು ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿರುವುದು ಇತಿಹಾಸವನ್ನು ಸೃಷ್ಟಿಸಿದೆ. ನಮ್ಮನ್ನು ಅಪಮಾನ, ಅವಮಾನ ಮಾಡಿದವರನ್ನು ಮತ್ತು ಬೈದವರ ಪಾದ ಮುಟ್ಟಿ ನಮಸ್ಕರಿಸುವ ಸಂಸ್ಕಾರ ನಮ್ಮದು. ಅವರ ವಯಸ್ಸಿಗೆ ಗೌರವಿಸುವ ಸಂಸ್ಕೃತಿ ನಮ್ಮಲಿದೆ. ಇದೀಗ ಪುತ್ತಿಲ ಪರಿವಾರ ಎಂಬ ಹೊಸ ಸಂಘಟನೆಯನ್ನು ಆರಂಭಿಸಲಾಗಿದೆ. ಹಿಂದೂ ಸಂಘಟನೆಯನ್ನು ಒಡೆದು ಹೋಗಬಾರದು ಎಂಬ ನಿಟ್ಟಿನಲ್ಲಿ ಈ ಸಂಘಟನೆ ಕಾರ್ಯೋನ್ಮುಖವಾಗಲಿದೆ ಎಂದರು.

ಗುರು ಗೋಳ್ವಾಳ್ಕರ್ ಯೋಚನೆಯಂತೆ ಯಾವುದೇ ಸಂಘಟನೆಗಳಿಗೆ ಅಪಮಾನವಾಗದಂತೆ ಆರ್‌ಎಸ್‌ಎಸ್‌ 100 ವರ್ಷಗಳನ್ನು ಪೂರೈಸಿದ ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಗೋಳ್ವಾಳ್ಕರ್ ಆಶಯಕ್ಕೆ ಪೂರಕವಾಗಿ ಯಾರನ್ನೂ ದೂಷಿಸದೇ ಸಮಾಜ ಕಟ್ಟುವ ಕೆಲಸ ಮಾಡಲಿದೆ. ಹಲವು ಇತಿಹಾಸಗಳಿಗೆ ಪುತ್ತೂರು ಸಾಕ್ಷಿಯಾಗಿದ್ದು ಸಂಘಟನೆ ಒಡೆದಿದ್ದಾರೆ ಎನ್ನುವವರಿಗೆ ಸಂಘಟನೆ ಕಟ್ಟಿ ಉತ್ತರ ನೀಡಲಿದ್ದೇವೆ ಎಂದು ಹೇಳಿದರು.

ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಚುನಾವಣೆಗೆ ಸ್ಪರ್ಧಿಸುವಾಗ ಗೋ ಹತ್ಯೆ ಆಗುವುದಿಲ್ಲ. ಹಿಂದೂ ಸಹೋದರಿಯರ ಮಾನಭಂಗ ನಡೆಯುವುದಿಲ್ಲ. ಧಾರ್ಮಿಕ ಕೇಂದ್ರ ಸಮಾಜಕ್ಕೆ ಶಕ್ತಿ ಕೊಡುತ್ತದೆ ಎಂಬ ವಿಶ್ವಾಸ ನಮಗಿತ್ತು. ಆದರೆ ಹಣ ಹಂಚಿಕೆ, ಅಪಪ್ರಚಾರ ಇನ್ನಿತರ ವಾಮಮಾರ್ಗದ ಕಾರಣದಿಂದಾಗಿ ನಮಗೆ ಸಣ್ಣ ಅಂತರದಿಂದ ಸೋಲಾಯಿತು. ಹಿಂದೂ ಸಮಾಜ ಶಕ್ತಿಯಾಗಬೇಕು ಎಂಬುದು ತಾಯಂದಿರಲ್ಲಿ ಮಠಾಧಿಪತಿಗಳಲ್ಲಿ, ಸಂಘ ಪರಿವಾರದಲ್ಲಿ, ಬಿಜೆಪಿ ಪದಾಧಿಕಾರಿಗಳಲ್ಲಿತ್ತು. ಕೆಲ ನಾಯಕರ ತಪ್ಪು ಹೆಜ್ಜೆಗಳಿಂದಾಗಿ ಅಂತಹ ಅವಕಾಶ ತಪ್ಪಿ ಹೋಯಿತು. ಮೇಲಿನ ಸ್ಥಾನದಲ್ಲಿ ಕುಳಿತಿದ್ದ ನಾಯಕರು ಮಾಡಿದ ತಪ್ಪು ನಿರ್ಧಾರದಿಂದಾಗಿ ಹಿಂದೂ ಸಮಾಜಕ್ಕೆ ಶಕ್ತಿ ಕೊಡಬೇಕಾದ ನಾವು ಶಕ್ತಿ ಕಳೆದುಕೊಂಡೆವು ಎಂದರು.

ನನ್ನಲ್ಲಿ ಎಂದೂ ಜಾತಿ ಇಲ್ಲ. ಇರುವುದು ಹಿಂದುತ್ವ ಮಾತ್ರ. ಆಧಿಕಾರಕ್ಕಾಗಿ ಎಂದೂ ರಾಜಕಾರಣ ಮಾಡಿಲ್ಲ. ಆದರೂ ನನ್ನ ಬಗ್ಗೆ ಹಲವಾರು ಅಪಮಾನ, ಅಪವಾದಗಳನ್ನು ಮಾಡಿದರು. ಅವರಿಗೆ ನನ್ನ ಕಣ್ಣೀರಿನ ಹನಿ ತಟ್ಟಲಿದೆ. ಶ್ರೀ ಮಹಾಲಿಂಗೇಶ್ವರ ಉತ್ತರ ನೀಡಲಿದ್ದಾನೆ. ದೈವ ದೇವರುಗಳು ಅವರಿಗೆ ಪಶ್ಚಾತ್ತಾಪದ ಜೊತೆಗೆ ಸನ್ನಡತೆಯನ್ನು ನೀಡಲಿ ಎಂದ ಅವರು ಚುನಾವಣೆಯಲ್ಲಿ ನಾನು ಸೋತ್ತಿದ್ದರೂ ಕಾರ್ಯಕರ್ತರ ವಿಶ್ವಾಸಕ್ಕೆ ಪಾತ್ರನಾಗಿದ್ದೇನೆ. ಸ್ಪರ್ಧೆಯ ಮೂಲಕ ದೇಶಕ್ಕೆ ಬದಲಾವಣೆಯ ಚಿಂತನೆ ನೀಡಿದ್ದೇನೆ ಎಂದು ಹೇಳಿದರು.

ದೇವರಮಾರು ಗದ್ದೆಯವರೆಗೆ ಬೃಹತ್ ಕಾಲ್ನಡಿಗೆ ಜಾಥಾ: ಸಭಾ ಕಾರ್ಯಕ್ರಮಕ್ಕೆ ಮೊದಲು ದರ್ಬೆಯಲ್ಲಿ ಚಾಲನೆ ಪಡೆದುಕೊಂಡ ಕಾಲ್ನಡಿಗೆ ಜಾಥಾ, ಮುಖ್ಯರಸ್ತೆ ಮೂಲಕ ಸಾಗಿ ದೇವಸ್ಥಾನದ ದೇವರಮಾರು ಗದ್ದೆಗೆ ತಲುಪಿತು. ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಸಾವಿರಾರು ಮಂದಿ ಜಾಥಾದಲ್ಲಿ ಬರಿಗಾಲಲ್ಲಿ ನಡೆದುಕೊಂಡು ಬಂದರು. ಜಾಥಾದ ಉದ್ದಕ್ಕೂ ಓಂ ನಮಃ ಶಿವಾಯ ಮಂತ್ರ ಪಠಣ ಉಚ್ಛಾರಣೆಯನ್ನು ಮಾಡಿದರು. ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಇನ್ನು ಕಾರ್ಯಕ್ರಮದಲ್ಲಿ ಪ್ರಸನ್ನ ಕುಮಾರ್ ಮಾರ್ತ, ಡಾ. ಸುರೇಶ್ ಪುತ್ತೂರಾಯ, ಉದ್ಯಮಿ ರಾಜಶೇಖರ್ ಬನ್ನೂರು, ಪುತ್ತಿಲ ಪರಿವಾರ ಸಂಘಟನೆಯ ನೂತನ ಲಾಂಚನ ಬಿಡುಗಡೆ ಮಾಡಿದರು. ಈ ವೇಳೆ ವಸಂತ ಲಕ್ಷ್ಮೀ ಮತ್ತು ಡಾ. ಗಣೇಶ್ ಪ್ರಸಾದ್ ಮುದ್ರಜೆ, ಉಮೇಶ್ ಕೋಡಿಬೈಲು ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಕರೆಂಟ್ ಬಿಲ್ ಕಟ್ಟಬೇಡಿ, ಮಹಿಳೆಯರು ಬಸ್ ಟಿಕೆಟ್ ತಗೊಬೇಡಿ: ಕೋಟ ಶ್ರೀನಿವಾಸ ಪೂಜಾರಿ

ABOUT THE AUTHOR

...view details