ಮಂಗಳೂರು: ರಾಹುಲ್ ಗಾಂಧಿಯಿಂದ ಮಂಗಳೂರಿನಲ್ಲಿ ಕಾಂಗ್ರೆಸ್ನ 5ನೇ ಭರವಸೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಇದೊಂದು ಅವೈಜ್ಞಾನಿಕ ಭರವಸೆ ಎಂದು ಟೀಕಿಸಿದ್ದಾರೆ. ಮಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು ಕಾಂಗ್ರೆಸ್ ಗೆಲ್ಲೊದೇ ಗ್ಯಾರಂಟಿ ಇಲ್ಲ, ಕಾಂಗ್ರೆಸ್ನದ್ದೇ ಗ್ಯಾರಂಟಿ ಇಲ್ಲ, ಹಾಗಾಗಿ ಗ್ಯಾರಂಟಿಗಳನ್ನು ಕೊಡುತ್ತಾ ಹೋಗುತ್ತಾರೆ. ಕಾಂಗ್ರೆಸ್ನ ಗ್ಯಾರಂಟಿಗಳು ಧಾರಾವಾಹಿಗಳಿದ್ದ ಹಾಗೆ. ವಾರ ವಾರ ಬಿಡುಗಡೆಯಾಗುತ್ತಾ ಹೋಗುತ್ತವೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜಸ್ಥಾನ, ಹಿಮಾಚಲದಲ್ಲಿ ಘೋಷಣೆ ಮಾಡಿದ ಭರವಸೆಗಳನ್ನು ಕಾಂಗ್ರೆಸ್ ಈವರೆಗೆ ಈಡೇರಿಸಿಲ್ಲ. ಈ ಹಿಂದೆ ಕರ್ನಾಟಕದಲ್ಲಿ ಘೋಷಣೆ ಮಾಡಿದ ಭರವಸೆಗಳನ್ನು ತಮ್ಮ 5 ವರ್ಷದ ಆಡಳಿತ ಅವಧಿಯಲ್ಲಿ ಈಡೇರಿಸಿಲ್ಲ. ಕರ್ನಾಟಕದಲ್ಲಿ ಈ ಹಿಂದೆ ಕಾಂಗ್ರೆಸ್ ತುಷ್ಟೀಕರಣ ರಾಜನೀತಿಯನ್ನು ಅನುಸರಿಸಿತ್ತು. 3,000 ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಅವರಿಗೆ ಪರಿಹಾರ ನೀಡಲು ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇರಲಿಲ್ಲ ಎಂದು ಕಿಡಿಕಾರಿದರು.
ಗರೀಬಿ ಹಠಾವೋ ಹೆಸರಿನಲ್ಲಿ ದೇಶದಲ್ಲಿ 10 ಚುನಾವಣೆಗಳನ್ನು ಎದುರಿಸಿದೆ. ಗರೀಬಿ ಹಠಾವೋ ಹೆಸರಿನಲ್ಲಿ ಗಾಂಧಿ ಕುಟುಂಬ ಬದುಕಿತ್ತು. ಗರೀಬಿ ಹಠಾವೋ ಹೆಸರಿನಲ್ಲಿ ಆಡಳಿತ ಮಾಡಿರುವ ಡಿಕೆಶಿ ಇಂದು 10 ಸಾವಿರ ಕೋಟಿಯ ಒಡೆಯ. ನ್ಯಾಯವಾದಿಯಾಗಿದ್ದ ಸಿದ್ದರಾಮಯ್ಯ ಈಗ ಕೋಟ್ಯಾಧಿಪತಿಯಾಗಿದ್ದಾರೆ. ಶೂನ್ಯದಿಂದ ಬಂದ ಖರ್ಗೆ ಇಂದು 2,000 ಕೋಟಿಯ ಧನಿಕರಾಗಿದ್ದಾರೆ. 60 ವರ್ಷಗಳಲ್ಲಿ ಕೊಡದೆ ಇರುವಂತಹ ಯೋಜನೆಯನ್ನು ಈಗ ಎಲ್ಲಿಂದ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನದ್ದು ಅವೈಜ್ಞಾನಿಕ ಭರವಸೆ: ಸುಳ್ಳು ಹೇಳಿ, ಮೋಸ ಮಾಡಿ ಜನರಿಗೆ ವಂಚನೆ ಮಾಡಿ ಅಧಿಕಾರ ಪಡೆಬಹುದು ಎಂದು ಕಾಂಗ್ರೆಸ್ ಅಂದುಕೊಂಡಿದೆ. ಇವರ ಸುಳ್ಳು ಗ್ಯಾರಂಟಿಗಳು ಜನರಿಗೆ ಗೊತ್ತಾಗಿದೆ. ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಸೇವೆಯ ಭರವಸೆ ನೀಡಿದ್ದಾರೆ. ರಾಜ್ಯದ ಬಜೆಟ್ ಗಾತ್ರ ಎಷ್ಟು ಅಂತ ಮೊದಲು ಲೆಕ್ಕ ಹಾಕಲಿ. ಒಟ್ಟು ರಾಜ್ಯದ ಬಜೆಟ್ ಎಷ್ಟು ? ಅದರಲ್ಲಿ ಈ ಯೋಜನೆಗಳಿಗೆ ಎಷ್ಟು ಹಣ ತೆಗೆದಿಡ್ತಾರೆ ಅಂತ ಮೊದಲು ಹೇಳಲಿ. ಇದೊಂದು ಅವೈಜ್ಞಾನಿಕ ಭರವಸೆ ಎಂದು ಆರೋಪಿಸಿದರು.
ಮೋದಿ ಕುರಿತು ಮಲ್ಲಿಕಾರ್ಜುನ ಖರ್ಗೆ ವಿಷ ಸರ್ಪ ಪದ ಬಳಕೆ ವಿಚಾರ: ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಕುರಿತು ವಿಷ ಸರ್ಪ ಪದ ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, ಈ ದೇಶ ಕಂಡ ಒಬ್ಬ ಶ್ರೇಷ್ಠ ನಾಯಕ ನರೇಂದ್ರ ಮೋದಿ. 2014 ರ ಬಳಿಕ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದು ನರೇಂದ್ರ ಮೋದಿ. ಇವತ್ತು ಜಗತ್ತಿನ ಎಲ್ಲಾ ನಾಯಕರು ನರೇಂದ್ರ ಮೋದಿ ಅವರನ್ನು ಕೊಂಡಾಡುತ್ತಾರೆ. ದೇಶದಲ್ಲಿ ಮೋದಿಯವರನ್ನು ಜನ ಗೌರವಿಸುತ್ತಾರೆ ಪೂಜಿಸುತ್ತಾರೆ.
ನರೇಂದ್ರ ಮೋದಿ ಅವರ ಬಗ್ಗೆ ಜನರಿಗಿರುವ ಅಭಿಮಾನದಿಂದ ಲಕ್ಷಾಂತರ ಜನ ಸೇರುತ್ತಾರೆ. ಅಂತಹ ಒಬ್ಬ ಶ್ರೇಷ್ಠ ನಾಯಕನನ್ನು ಕೆಟ್ಟ ಶಬ್ದಗಳಿಂದ ದೋಷಣೆ ಮಾಡುವುದು ಕಾಂಗ್ರೆಸ್ನ ರಾಜಕಾರಣದ ರೀತಿ. ಸೋನಿಯಾ ಗಾಂಧಿ ಈ ಹಿಂದೆ ಮೋದಿ ಅವರನ್ನು ಸಾವಿನ ಸರ್ದಾರ ಅಂತ ಕರೆದಿದ್ದರು. ಪ್ರಧಾನಿ ಮೋದಿ ಅವರನ್ನು ರಾಹುಲ್ ಗಾಂಧಿ ಈ ಹಿಂದೆ ಕೆಟ್ಟ ಶಬ್ದದಿಂದ ಉಲ್ಲೇಖಿಸಿದ್ದರು. ಒಮ್ಮೆ ಮೋದಿ ಅವರನ್ನು ಚಾಯ್ ವಾಲಾ ಅಂತ ತಮಾಷೆ ಮಾಡಿದರು. ಕಾಂಗ್ರೆಸ್ ಯಾವಾಗ ಮೋದಿಯವರನ್ನು ಕಟು ಶಬ್ದಗಳಿಂದ ಟೀಕಿಸಿದೆಯೋ ಆ ಸಂದರ್ಭದಲ್ಲಿ ಕಾಂಗ್ರೆಸ್ ಸೋತಿದೆ. ಜನ ನರೇಂದ್ರ ಮೋದಿ ಅವರ ಜೊತೆಗಿದ್ದಾರೆ. ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮೋದಿಯವರನ್ನು ವಿಷದ ಹಾವು ಅಂತ ಕರೆದಿದ್ದಾರೆ. ನನಗನಿಸುವುದು ಇದು ಕಾಂಗ್ರೆಸ್ಸಿನ ಅಂತ್ಯ. ಕರ್ನಾಟಕದಲ್ಲಿ ಕಾಂಗ್ರೆಸ್ನ ಅಂತ್ಯ ಹಾಡೋದಕ್ಕೆ ಈ ಶಬ್ದವನ್ನು ಉಲ್ಲೇಖ ಮಾಡಿದ್ದಾರೆ. ಈ ರೀತಿಯ ಪದ ಬಳಕೆ ಮಾಡಿರುವುದಕ್ಕೆ ಖರ್ಗೆ ಕ್ಷಮೆಯಾಚಿಸಬೇಕು. ಕಾಂಗ್ರೆಸ್ ಒಂದು ವಿಶೇಷ ಸರ್ಪ. ಪ್ರಧಾನಿ ಅವರನ್ನು ಈ ರೀತಿಯ ಪದಗಳನ್ನು ಬಳಸಿ ಟೀಕೆ ಮಾಡುವುದು ಖರ್ಗೆ ಅವರಿಗೆ ಶೋಭೆ ತರುವಂತದ್ದಲ್ಲ ಎಂದು ಹೇಳಿದರು.
ಇದನ್ನೂ ಓದಿ:ನಾವು ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡುತ್ತೇವೆ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ