ಮಂಗಳೂರು:ಮೂಲ್ಕಿ ಸೀಮೆ ಅರಸು ಜೋಡುಕರೆ ಕಂಬಳದಲ್ಲಿ ಅರ್ಧ ಕರೆಯಲ್ಲಿ ಜಾರಿ ಬಿದ್ದರೂ ಸ್ವರ್ಣ ಪದಕ ಪಡೆಯುವಲ್ಲಿ ಯುವಕನೊಬ್ಬ ಯಶಸ್ವಿಯಾಗಿದ್ದಾರೆ. ಹಗ್ಗ ಹಿರಿಯ ವಿಭಾಗದ ಫೈನಲ್ ಹಣಾಹಣಿಯಲ್ಲಿ ನಂದಳಿಕೆ ಕೋಣವನ್ನು ಓಡಿಸಿದ ಬಂಬ್ರಾಣಬೈಲು ವಂದಿತ್ ಶೆಟ್ಟಿಯವರೇ ಈ ಸಾಧಕ. ಇವರು ಓಡುತ್ತಿದ್ದಾಗ ಅರ್ಧ ಕರೆಯಲ್ಲೇ ಜಾರಿ ಬಿದ್ದರೂ, ಕೋಣಗಳ ಜತೆಗೇ ಗುರಿ ಮುಟ್ಟಿ ಸ್ವರ್ಣ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಿನ್ನೆ ಸಂಜೆ 06.07 ಸಮಯದಲ್ಲಿ ಘಟನೆ ನಡೆಯಿತು. ಹಗ್ಗ ಹಿರಿಯ ವಿಭಾಗದ ಫೈನಲ್‌ನಲ್ಲಿ ಬಲಿಷ್ಠ ಕೋಣಗಳಾದ ನಂದಳಿಕೆ ಶ್ರೀಕಾಂತ್ ಭಟ್ 'ಬಿ' ಮತ್ತು ಪದವು ಕಾನಡ್ಕ ಪ್ಲೇವಿ ಡಿಸೋಜರ ಕೋಣಗಳ ಮಧ್ಯೆ ಸ್ಪರ್ಧೆ ನಡೆಯುತ್ತಿತ್ತು. ಮೂಡಾಯಿ ಕರೆಯಲ್ಲಿ ಪದವು ಕಾನಡ್ಕ ಪ್ಲೇವಿ ಡಿಸೋಜರ(ಮುನ್ನೆ-ಗಂತು) ಕೋಣಗಳು ಹಾಗೂ ಪಡ್ಡಾಯಿ ಕರೆಯಲ್ಲಿ ನಂದಳಿಕೆ (ಕುಟ್ಟಿ-ರಾಜಾ) ಶ್ರೀಕಾಂತ್ ಭಟ್‌ರ ಕೋಣಗಳು ಓಡುತ್ತಿದ್ದವು. ಸುಮಾರು ಅರ್ಧ ಕರೆ ದಾಟುತ್ತಿದ್ದಂತೆ ನಂದಳಿಕೆ ಕೋಣಗಳನ್ನು ಓಡಿಸುತ್ತಿದ್ದ ವಂದಿತ್ ಶೆಟ್ಟಿ ಕಾಲು ಜಾರಿ ಕಂಬಳ ಕರೆಯಲ್ಲೇ ಬಿದ್ದುಬಿಟ್ಟರು.
ಕಾಲು ಜಾರಿ ಬಿದ್ದರೂ ಬಂಬ್ರಾಣಬೈಲು ವಂದಿತ್ ಶೆಟ್ಟಿ ಅವರು ಸುಮಾರು 80 ಮೀಟರ್ ದೂರವನ್ನು ಹಗ್ಗ ಹಿಡಿದೇ ಕೋಣದ ಜತೆ ಬಂದು ಗುರಿ ತಲುಪಿದ್ದಾರೆ. 11.50 ಸೆಕೆಂಡ್‌ನಲ್ಲಿ ಅವರು ಗುರಿ ಮುಟ್ಟಿದ್ದಾರೆ. ಈ ಮೂಲಕ ಸ್ವರ್ಣ ಗೆಲ್ಲುವಲ್ಲಿ ಯಶಸ್ವಿಯಾದರು. ವಂದಿತ್ ಶೆಟ್ಟಿ ಗುರಿ ತಲುಪುತ್ತಿದ್ದಂತೆ ಸಹಾಯಕರು ಬಂದು ಮಂಜೊಟ್ಟಿಯಲ್ಲಿ ಅವರನ್ನು ಸಂತೈಸಿದ್ದಾರೆ. ಕರೆಯ ಅರ್ಧದಲ್ಲೇ ಜಾರಿ ಬಿದ್ದರೂ ಗುರಿ ತಲುಪಿದ ವಂದಿತ್ ಶೆಟ್ಟಿ ಅವರ ಬಗ್ಗೆ ಕಂಬಳಾಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ.