ಮಂಗಳೂರು: ರಾಜಸ್ಥಾನದಲ್ಲಿ ನೂಪುರ್ ಶರ್ಮಾ ಬೆಂಬಲಿಗನನ್ನು ಶಿರಚ್ಛೇದನ ಮಾಡಿ ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಯಾಕೆ ಮೌನ ವಹಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ. ಹಿಂದೂ ಟೈಲರ್ ಹತ್ಯೆಯು ನಾಚಿಗೆಗೇಡು, ಇದೊಂದು ವ್ಯವಸ್ಥಿತ ಸಂಚು. ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರುವಾಗಿದೆ ಎಂದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೇ ಮಾದರಿಯಲ್ಲಿ ಶಿವಮೊಗ್ಗದಲ್ಲಿಯೂ ಹರ್ಷ ಎಂಬ ಯುವಕನ ಹತ್ಯೆ ನಡೆದಿತ್ತು. ಹರ್ಷನ ಕತ್ತು ಸೀಳಿ ಕೊಲೆಗೈದು ಅದರ ವಿಡಿಯೋವನ್ನು ಹರಿಬಿಡಲಾಗಿತ್ತು. ರಾಜಸ್ಥಾನದ ಘಟನೆ ಮತ್ತು ಗಲಭೆಯ ಹಿಂದೆ ವಿದೇಶಿ ಕೈವಾಡವಿದೆ. ಅಲ್ಲಿನ ಸರ್ಕಾರದ ಪುಷ್ಟೀಕರಣ ನೀತಿಯಿಂದಾಗಿ ಈ ಪ್ರಕರಣ ನಡೆದಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮೌನ: ಈ ಬಗ್ಗೆ ಕಾಂಗ್ರೆಸ್ ಈಗ ಮೌನವಾಗಿರುವುದರ ಹಿನ್ನೆಲೆ ಏನು? ಇಂತಹ ದುಷ್ಕೃತ್ಯ ನಡೆದಾಗ ಕಾಂಗ್ರೆಸ್ ಯಾರ ಪರವಾಗಿರುತ್ತೆ ಎನ್ನುವುದು ಮುಖ್ಯ. ಈ ಘಟನೆ ದೇಶದಲ್ಲಿ ನಡೆಯಲು ತುಷ್ಟೀಕರಣದ ರಾಜನೀತಿ ಕಾರಣವಾಗಿದೆ. ಇಂತಹ ಘಟನೆ ಖಂಡಿಸುತ್ತೇನೆ, ಇದರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಕಟೀಲ್ ಆಗ್ರಹಿಸಿದರು.