ಮಂಗಳೂರು : ನಗರದ ಎಮ್ಮೆಕೆರೆಯ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಉದ್ಘಾಟನಾ ಸಮಾರಂಭಕ್ಕೆ ತಡವಾಗಿ ಆಹ್ವಾನಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಈಜುಕೊಳ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿಯೇ ಗರಂ ಆದ ಘಟನೆ ನಡೆದಿದೆ.
ನಗರದ ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್ ಪೂಲ್ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಈ ಘಟನೆ ನಡೆದಿದೆ. ಇದೇ ಸಭೆಯಲ್ಲಿದ್ದ ಸಚಿವ ಭೈರತಿ ಸುರೇಶ್ ಅವರು ತಕ್ಷಣ ಅಧಿಕಾರಿಯನ್ನು ಕರೆದು ಕ್ಲಾಸ್ ತೆಗೆದುಕೊಂಡಿದ್ದಾರೆ. ಸಭೆಯಲ್ಲಿ ಮಾತನಾಡಿದ ಅವರು, ಸ್ವಿಮ್ಮಿಂಗ್ ಫೂಲ್ ಉದ್ಘಾಟನೆ ಇಂದು ಇದ್ದರೆ, ನಿನ್ನೆ ಬಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಆಹ್ವಾನ ನೀಡಿದ್ದಾರೆ. ಆದ್ದರಿಂದ ಈ ಕಾರ್ಯಕ್ರಮದ ಉದ್ಘಾಟನೆ ಬಗ್ಗೆ ನನಗೆ ನಿನ್ನೆವರೆಗೆ ಯಾವುದೇ ಮಾಹಿತಿಯೇ ಇರಲಿಲ್ಲ. ಇಂದು ಬೆಳಗ್ಗೆ ತನಗೆ ದೆಹಲಿಯಲ್ಲಿ ಕಾರ್ಯಕ್ರಮ ಫಿಕ್ಸ್ ಆಗಿತ್ತು.
ನಾನು ಅಲ್ಲಿಗೆ ತೆರಳಬೇಕಿತ್ತು. ಆದರೆ, ನಿನ್ನೆ ಹೇಳಿಕೆ ಬಂದಿದ್ದರಿಂದ ನಾನು ಸಚಿವರಿಗೆ ಅಗೌರವ ತೋರಬಾರದೆಂದು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಕ್ಕೂ ನಾನು ಬರುವುದಿಲ್ಲ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುವುದರಿಂದ ಪ್ರೋಟೋಕಾಲ್ ಪ್ರಕಾರ ನಾನು ಇಲ್ಲಿ ಇರಲೇಬೇಕು. ಆದರೆ, ಕೇಂದ್ರದ ಸ್ಮಾರ್ಟ್ ಸಿಟಿ ಕಾರ್ಯಕ್ರಮಕ್ಕೆ ನನ್ನನ್ನೇ ತಡವಾಗಿ ಆಹ್ವಾನಿಸಲಾಗಿದೆ. ಸಚಿವರ ಡೇಟ್ ಫಿಕ್ಸ್ ಆದ ತಕ್ಷಣ ನಮ್ಮಲ್ಲಿ ಬಂದು ಬರೆಸಿ ನನಗೆ ತಿಳಿಸಬೇಕು. ಮುಂದೆ ಈ ತಪ್ಪುಗಳಾಗಬಾರದು ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ನಳಿನ್ ಕುಮಾರ್ ಕಟೀಲ್ ತಾಕೀತು ಮಾಡಿದರು.
ಈ ವೇಳೆ ಅಧಿಕಾರಿಗಳನ್ನು ತಮ್ಮ ಬಳಿ ಕರೆಯಿಸಿದ ಸಚಿವ ಭೈರತಿ ಸುರೇಶ್ ಅವರು, ಸಂಸದ ನಳಿನ್ ಅವರನ್ನು ತಡವಾಗಿ ಆಹ್ವಾನಿಸಿದ್ದಕ್ಕೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಮಂಗಳೂರಿನ ಈ ಈಜುಕೊಳ ನಿರ್ಮಾಣಕ್ಕೆ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸ್ಮಾರ್ಟ್ ಸಿಟಿ ಪ್ರಥಮ ಹಂತದಲ್ಲಿ ಮಂಗಳೂರು ಇರಲಿಲ್ಲ. ರಾಜ್ಯದ ಏಳು ನಗರಗಳು ಇದ್ದರೂ ಮಂಗಳೂರು ಇರಲಿಲ್ಲ. ಭೈರತಿ ಸುರೇಶ್ ಇಲ್ಲಿ ಆದಾಯ ತರೋ ಯೋಜನೆಗಳಿಲ್ಲ ಅಂತ ಹೇಳಿದರು. ಆಗ ಇಲ್ಲಿ ಕಾಂಗ್ರೆಸ್ನ ಶಾಸಕ ಜೆ. ಆರ್ ಲೋಬೋ ಇದ್ದರು.
ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ಬಳಿಕ ಲೋಬೋ ಜೊತೆ ಚರ್ಚೆಯಾಗಿತ್ತು. ಆದರೆ ಆಗ ಹಾಕಿದ ಯೋಜನೆಗಳಲ್ಲಿ ಇದೆಲ್ಲ ಇರಲಿಲ್ಲ. ಆದರೆ ವೇದವ್ಯಾಸ ಕಾಮತ್ ಬಂದ ಮೇಲೆ ವೇಗವಾಗಿ ಅಭಿವೃದ್ಧಿ ಆಗಿದೆ. ನೀವು ಹೇಳಿದ ಆದಾಯ ತರೋ ಯೋಜನೆಗಳೂ ಇಲ್ಲಿ ಆಗ್ತಿದೆ. ಮಾರುಕಟ್ಟೆ ಸೇರಿ ಹಲವು ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೀತಾ ಇದೆ. ಅಭಿವೃದ್ಧಿಯ ಜೊತೆಗೆ ನೀವು ಹೇಳಿದ ಆದಾಯ ತರೋ ಯೋಜನೆಗಳೂ ಇದೆ. ಅಭಿವೃದ್ಧಿ ಕಾರ್ಯದಲ್ಲಿ ನಮ್ಮಲ್ಲಿ ಯಾವುದೇ ರಾಜಕೀಯ ಇಲ್ಲ. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಅಭಿವೃದ್ಧಿ ಆಗಿದೆ. ಮಾರ್ಕೆಟ್, ಪಾರ್ಕಿಂಗ್ ಜಾಗ ಸೇರಿ ಹಲವು ಕೆಲಸ ಆಗ್ತಿದೆ.
ಒಮ್ಮೆ ಮಾನ್ಯ ಭೈರತಿ ಸುರೇಶ್ ಅವರು ಇದರ ಸಭೆ ನಡೆಸಬೇಕು. ವಾಟರ್ ಫ್ರಂಟ್ ಕಾಮಗಾರಿಗೆ ಕೆಲ ಖಾಸಗಿ ವ್ಯಕ್ತಿಗಳ ತಡೆ ಇದೆ. ಅದನ್ನು ಮಾನ್ಯ ಸಚಿವರು ಸಭೆ ನಡೆಸಿ ಸರಿ ಪಡಿಸಬೇಕು. ನಂತೂರು ಫ್ಲೈ ಓವರ್ ಕಾಮಗಾರಿ ಆರು ತಿಂಗಳಿನಿಂದ ಬಾಕಿ ಇದೆ. ಇಲ್ಲಿ ಮರ ಕಡಿದರೆ ಪ್ರತಿಭಟನೆ ಆಗುತ್ತೆ. ಭೂ ಸ್ವಾಧೀನ ಸಮಸ್ಯೆ ಇದೆ. ಒಂದು 28 ಕಿ. ಮೀ ಹೆದ್ದಾರಿ ಅಭಿವೃದ್ಧಿಗೆ 40 ಕಡೆ ಕೇಸ್ ಹಾಕಿದ್ದಾರೆ. ಇದರಿಂದ ಹಲವು ಕಡೆ ರಾಷ್ಟ್ರೀಯ ಹೆದ್ದಾರಿ ಕೆಲಸ ನಿಂತಿದೆ. ಇಲ್ಲಿನ ಜನರು ಅಭಿವೃದ್ಧಿ ಬಗ್ಗೆ ಮಾತನಾಡ್ತಾರೆ. ಆದರೆ ಅಭಿವೃದ್ಧಿ ಮಧ್ಯೆ ಪ್ರತಿಭಟನೆ ಕೂಡ ಆಗುತ್ತೆ. ಮರ ಕಡಿಯೋದು, ಭೂಸ್ವಾಧೀನ ವಿಚಾರದಲ್ಲಿ ಸಮಸ್ಯೆ ಇದೆ ಎಂದರು.
ಇದನ್ನೂ ಓದಿ :’ಪಕ್ಷದ ಬೆಳವಣಿಗೆಗೆ ನನ್ನ ಸೇವೆ ನಿರಂತರವಾಗಿರಲಿದೆ’ : ಬಹಿರಂಗ ಪತ್ರದ ಮೂಲಕ ವಂದನೆ ತಿಳಿಸಿದ ಕಟೀಲ್