ಮಂಗಳೂರು:ಇತ್ತೀಚೆಗೆ ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಕಾರ್ಯ ಅಲ್ಲಲ್ಲಿ ಕಾಣ ಸಿಗುತ್ತಿವೆ. ಅಂತಹ ಹಡಿಲು ಭೂಮಿಯಲ್ಲಿ ಕೃಷಿ ಕಾರ್ಯ ನಡೆಯುತ್ತಿರುವಲ್ಲಿಗೆ ಶಾಸಕ ಯು.ಟಿ. ಖಾದರ್ ಅಚಾನಕ್ಕಾಗಿ ಹೋಗಿದ್ದು, ಈ ಸಂದರ್ಭ ಸ್ವತಃ ತಾವೇ ಗದ್ದೆಗಿಳಿದು ನಾಟಿ ಮಾಡಿ ಕೃಷಿಕರಿಗೆ ಸಾಥ್ ನೀಡಿದ್ದಾರೆ.
ಕೃಷಿ ಕಾರ್ಯ ನಡೆಯುತ್ತಿರುವಲ್ಲಿಗೆ ತೆರಳಿದ ಖಾದರ್ ಹಾಕಿರುವ ಪಂಚೆಯನ್ನು ಮೇಲಕ್ಕೆತ್ತಿ ಕಟ್ಟಿ, ತಲೆಗೆ ಮುಟ್ಟಾಲೆ ಇಟ್ಟು, ನಾಟಿ ಮಾಡುತ್ತಿದ್ದ ಮಹಿಳೆಯರ ಸಾಲಿನಲ್ಲಿ ನಿಂತು ನಾಟಿ ಮಾಡಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗಿದ್ದು, ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿದೆ.
ಅಂದ ಹಾಗೆ ಇದು ನಡೆದಿದ್ದು ಕಳೆದ ಶುಕ್ರವಾರ. ನಗರದ ಕೊಣಾಜೆಯ ಕೆಳಗಿನ ಮನೆಯ ಹಡಿಲು ಬಿದ್ದ ಭೂಮಿಯಲ್ಲಿ ನಾಗಬ್ರಹ್ಮ ಪ್ರಗತಿಪರ ಸಂಘ ಹಾಗೂ ಊರಿನ ಪ್ರಮುಖರು ಸೇರಿ ಭತ್ತ ಕೃಷಿ ಮಾಡುವ ಸಂಕಲ್ಪ ಮಾಡಿದ್ದರು. ಇಲ್ಲಿಗೆ ನಾಟಿ ಕೆಲಸಕ್ಕಾಗಿ ಇಬ್ಬರು ಮಹಿಳೆಯರು ತೆರಳುತ್ತಿದ್ದರು. ಅದೇ ದಾರಿಯಾಗಿ ಹೋಗುತ್ತಿದ್ದ ಶಾಸಕ ಖಾದರ್ ಮಹಿಳೆಯರನ್ನು 'ಎಲ್ಲಿಗೆ ಹೋಗುವುದೆಂದು' ಕೇಳಿದ್ದಾರೆ. ಅವರು 'ನಾಟಿ ಕೆಲಸಕ್ಕಾಗಿ' ಎಂದು ಹೇಳಿದ್ದಾರೆ. ತಕ್ಷಣ ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು, ನಾಟಿ ಕಾರ್ಯ ನಡೆಯುತ್ತಿರುವಲ್ಲಿಗೆ ಕರೆದೊಯ್ದಿದ್ದಾರೆ.
ಹಾಗೆ ಬಂದವರು ಉತ್ಸಾಹದಿಂದ ಸ್ವತಃ ತಾವೇ ಗದ್ದೆಗಿಳಿದು ನಾಟಿ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಈ ಫೋಟೋ ಈಗ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ:ಹಡಿಲು ಭೂಮಿಯಲ್ಲಿ ಕೃಷಿ.. ಕಾನೂನು ತೊಡಕು ನಿವಾರಣೆಗೆ ಚಿಂತನೆ: ಸಚಿವ ಬಿ.ಸಿ. ಪಾಟೀಲ್