ಮೈಸೂರು:ಶಾಸಕ ಸಾ.ರಾ.ಮಹೇಶ್ ಅವರು ಐಎಎಸ್ ಅಧಿಕಾರಿರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲು ಮಾಡಿದ್ದಾರೆ. ಈ ಬಗ್ಗೆ ಶಾಸಕ ಸಾ.ರಾ.ಮಹೇಶ್ ಪರ ವಕೀಲ ಅರುಣ್‌ಕುಮಾರ್ ಅವರು ಶಾಸಕರ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ರೋಹಿಣಿ ಸಿಂಧೂರಿ ಅವರು ಆಡಿಯೋದಲ್ಲಿ ಸಾ.ರಾ.ಮಹೇಶ್ ಜೈಲಲ್ಲಿ ಇರುತ್ತಾರೆ ಎಂದು ಆರೋಪ ಮಾಡಿದ್ದಾರೆ. ಈ ಸಂಬಂಧ ಸಾ.ರಾ. ಮಹೇಶ್ ಪರವಾಗಿ 2021ರ ಜುಲೈ 1ರಂದು ಲೀಗಲ್ ನೋಟಿಸ್ ಜಾರಿ ಮಾಡಿದ್ದೆವು. ಸಾಮಾಜಿಕ ಜಾಲತಾಣದ ಆಡಿಯೋದಲ್ಲಿ ನಿಮ್ಮ ದ್ವನಿಯೇ, ಉದ್ದೇಶಪೂರ್ವಕವಾಗಿ ಮಾತನಾಡಿದ್ದೀರಾ ಎಂದು ಎರಡು ಪ್ರಶ್ನೆ ಕೇಳಿದ್ದೆವು. ಖಾಸಗಿ ಸಂಭಾಷಣೆ ಅಂತ ಒಪ್ಪಿಕೊಂಡಿದ್ದಾರೆ. ಅದರ ಆಧಾರದ ಮೇಲೆ 2ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹಾಕಿದ್ದೇವೆ ಎಂದು ವಕೀಲರು ತಿಳಿಸಿದರು.
ಸಾ.ರಾ.ಮಹೇಶ್ ಪರ ವಕೀಲರಾದ ಅರುಣ್‌ಕುಮಾರ್ ಸುದ್ದಿಗೋಷ್ಠಿ ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಪ್ರಕರಣ:ಒಂದು ಕೋಟಿ ರೂ. ನಷ್ಟ ಭರಿಸುವಂತೆ ಮೊಕದ್ದಮೆ ಹೂಡಿದ್ದೇವೆ. 2022ರ ಅಕ್ಟೋಬರ್ 20ರಂದು ರೋಹಿಣಿ ಸಿಂಧೂರಿ ನ್ಯಾಯಾಲಯಕ್ಕೆ ಉತ್ತರ ಕೊಡಬೇಕಾಗುತ್ತದೆ. ಈಗಾಗಲೇ ಖಾಸಗಿ ಸಂಭಾಷಣೆ ಅಂತ ಒಪ್ಪಿಕೊಂಡಿರುವುದರಿಂದ ಬೇರೆ ಏನೂ ಹೇಳಿಕೆ ನೀಡಲು ಅವಕಾಶ ಇಲ್ಲ. ಆ ಸಂಭಾಷಣೆಯ ಹಿನ್ನೆಲೆ, ಉದ್ದೇಶವನ್ನೂ ಕೇಸ್‌ಗೆ ಸೇರಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಮಾಹಿತಿ ನೀಡಿದರು.
ಸಾ.ರಾ.ಮಹೇಶ್ ವಾಗ್ದಾಳಿ:ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ನನ್ನ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ್ದರು. ಆದರೆ, ಪ್ರಾದೇಶಿಕ ಆಯುಕ್ತರು, ಈ ಪ್ರಕರಣ ಸುಳ್ಳು ಎಂದು ಹೇಳಿದ್ದಾರೆ. ಅವರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದೆ. ಆ ನಿಟ್ಟಿನಲ್ಲಿ ಸಿವಿಲ್ ಮತ್ತು ಕ್ರಿಮಿನಲ್, ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದರು.
(ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ 1,200 ಪುಟಗಳ ದಾಖಲೆ ಸಲ್ಲಿಸಿದ ಸಾ ರಾ ಮಹೇಶ್)