ಬೆಳ್ತಂಗಡಿ (ದಕ್ಷಿಣ ಕನ್ನಡ):2012ರಲ್ಲಿ ನಡೆದಬೆಳ್ತಂಗಡಿ ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಮರು ತನಿಖೆ ನಡೆಸಿ, ಮೃತ ಬಾಲಕಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
''2012ರ ಅಕ್ಟೋಬರ್ 09ರಂದು ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಬಗ್ಗೆ ಹಲವಾರು ಇಲಾಖೆಗಳಿಂದ ತನಿಖೆ ನಡೆದು, ಬಳಿಕ ತಮ್ಮ ನೇತೃತ್ವದ ಸರ್ಕಾರವು 2013ರಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದು ತಮಗೂ ತಿಳಿದ ವಿಚಾರವಾಗಿದೆ. ಅಲ್ಲಿಂದ 2023 ರವರೆಗೂ ನಡೆದ ಸಿಬಿಐ ತನಿಖೆಯಲ್ಲಿ ಶಂಕಿತ ಆರೋಪಿಯನ್ನು ದೋಷ ಮುಕ್ತಿಗೊಳಿಸಿ ನ್ಯಾಯಾಲಯವು ಆದೇಶ ನೀಡಿದೆ. ಈ ತನಿಖೆಯ ಫಲಶೃತಿಯ ಬಗ್ಗೆ ಅಪರಾಧಿಗಳನ್ನು ಕಾನೂನಿನ ಚೌಕಟ್ಟಿನೊಳಗೆ ತಂದು ಶಿಕ್ಷೆ ನೀಡಲು ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂಬ ದುಗುಡ ಬೆಳ್ತಂಗಡಿಯ ಜನತೆಗಿದೆ'' ಎಂದು ಮನವಿ ಪತ್ರದಲ್ಲಿ ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
''ನಾಗರಿಕರ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರವು ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ ಮೃತ ಸಹೋದರಿ ಹಾಗೂ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕನ ನೆಲೆಯಲ್ಲಿ ಹಾಗೂ ವೈಯಕ್ತಿಕವಾಗಿ ತಮ್ಮನ್ನು ಆಗ್ರಹಿಸುತ್ತೇನೆ'' ಎಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಜೊತೆಗಿದ್ದರು.
ಇದನ್ನೂ ಓದಿ:ಬೆಳ್ತಂಗಡಿಯ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಕೇಸ್ ಆರೋಪಿ ಸಂತೋಷ್ ರಾವ್ ನಿರಪರಾಧಿ ಸಿಬಿಐ ಕೋರ್ಟ್ ತೀರ್ಪು
ಆರೋಪಿ ದೋಷಮುಕ್ತ ಎಂದು ಕೋರ್ಟ್ ತೀರ್ಪು:11 ವರ್ಷಗಳ ಹಿಂದೆ ನಡೆದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಪ್ರಕರಣವು ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಪ್ರಕರಣ ಸಂಬಂಧ ಬೆಳ್ತಂಗಡಿ ಠಾಣೆ ಪೊಲೀಸರು ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ್ದರು. ಉಡುಪಿಯ ಕಾರ್ಕಳ ತಾಲೂಕಿನ ಕುಕ್ಕುಂದುರು ನಿವಾಸಿ ಸಂತೋಷ್ನನ್ನು ಧರ್ಮಸ್ಥಳದ ಬಾಹುಬಲಿ ಪ್ರತಿಮೆ ಇರುವ ಬೆಟ್ಟದ ಬಳಿಯಲ್ಲಿ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಈ ಬಗ್ಗೆ ಸಿಬಿಐ ತನಿಖೆ ನಡೆಸಿತ್ತು. ಸುದೀರ್ಘ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ಇತ್ತೀಚೆಗೆ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಆರೋಪಿಯನ್ನು ದೋಷಮುಕ್ತ ಎಂದು ತೀರ್ಪು ಪ್ರಕಟಿಸಿತ್ತು. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಪಿ.ಬಿ. ಅವರು ತೀರ್ಪು ನೀಡಿದ್ದರು.