ಬೆಳ್ತಂಗಡಿ(ದಕ್ಷಿಣ ಕನ್ನಡ):ಸಂಕಷ್ಟಗಳ ಸರಮಾಲೆಯನ್ನು ಸಂಕಲ್ಪ ಶಕ್ತಿಯಿಂದ ಮೆಟ್ಟಿ ನಿಂತು ಕರ್ನಾಟಕ ರಾಜ್ಯವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಮುನ್ನಡೆಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿಜಕ್ಕೂ ಅಭಿನಂದನಾರ್ಹರರು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅಭಿಪ್ರಾಯಪಟ್ಟಿದ್ದಾರೆ.
2018ರ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಅತಂತ್ರವಾಗಿದ್ದರೂ ಬಿಜೆಪಿ ಕೂದಲೆಳೆಯ ಅಂತರದಲ್ಲಿ ಬಹುಮತದಿಂದ ವಂಚಿತವಾಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಒಂದು ವರ್ಷದ ಆಡಳಿತದ ಅರಾಜಕತೆ, ವಿರೋಧಾಭ್ಯಾಸದ ನಡುವೆ ರಾಜ್ಯದ ಜನತೆ ಗೊಂದಲದಲ್ಲಿದ್ದರು. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಯಡಿಯೂರಪ್ಪರವರು ಹಲವು ತೊಂದರೆಗಳ ನಡುವೆ ಯಶಸ್ವಿಯಾಗಿ ಒಂದು ವರ್ಷದ ಆಡಳಿತಾವಧಿಯನ್ನು ಪೂರೈಸಿ ಜನ ಮಾನಸದಲ್ಲಿ ತನ್ನದೇ ಆದ ಛಾಪು ಮೂಡಿಸುವುದರೊಂದಿಗೆ ಆಡಳಿತದಲ್ಲಿ ಮಹತ್ವದ ಬದಲಾವಣೆ ತಂದಿದ್ದಾರೆ ಎಂದರು.
ರೈತ ಸಮುದಾಯದ ಬವಣೆಯನ್ನು ಸಮೀಪದಿಂದ ಕಂಡಿದ್ದ ಮುಖ್ಯಮಂತ್ರಿಗಳಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಹೆಚ್ಚುವರಿಯಾಗಿ ₹4000 ಏರಿಕೆ, ಭೂ ಕಾಯ್ದೆಗೆ ಕ್ರಾಂತಿಕಾರಿ ತಿದ್ದುಪಡಿ ಮೂಲಕ ಕೃಷಿ ಭೂಮಿ ಮಾರಾಟ ನಿರ್ಬಂಧ ತೆರವು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮೂಲಕ ರೈತ ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಸೌಲಭ್ಯ, ಉದ್ಯೋಗ ಹಾಗೂ ಉತ್ಪಾದನಾ ಸೃಷ್ಠಿಗೆ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ, ಶುದ್ಧ ಕುಡಿಯುವ ನೀರು ಪೂರೈಕೆಗೆ ಮನೆ ಮನೆಗೆ ಗಂಗಾ ಯೋಜನೆ, ಪ್ರವಾಹ ಪರಿಸ್ಥಿತಿಯ ಸಮರ್ಪಕ ನಿರ್ವಹಣೆ, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಸಂಕಷ್ಟಕ್ಕೀಡಾದ ರೈತರು, ಚಾಲಕರು, ನೇಕಾರರು, ಶ್ರಮಿಕ ಬಂಧುಗಳು, ಕಟ್ಟಡ ಕಾರ್ಮಿಕರು, ಆಶಾ ಕಾರ್ಯಕರ್ತೆಯರಿಗೆ ವಿಶೇಷ ಧನ ಸಹಾಯ ನೇರ ಫಲಾನುಭವಿಗಳ ಖಾತೆಗೆ ಜಮೆ, ಸಮರ್ಪಕ ಪಡಿತರ ವಿತರಣೆ ಇತ್ಯಾದಿ ಹತ್ತು ಹಲವು ಜನಪರ ಯೋಜನೆಗಳು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಕೊಡುಗೆಗಳಾಗಿವೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಧಣಿವರಿಯದ ದುಡಿಮೆಯ ಫಲಶ್ರುತಿಯು ಬೆಳ್ತಂಗಡಿಯ ಹಳ್ಳಿ ಹಳ್ಳಿಗಳಲ್ಲೂ ಗೋಚರಿಸುತ್ತಿದ್ದು, ಮೂಲಸೌಕರ್ಯ, ರಸ್ತೆ ಅಭಿವೃದ್ಧಿ, ಕಿಂಡಿ ಅಣೆಕಟ್ಟು, ಪ್ರವಾಸೋದ್ಯಮ, ಶಿಕ್ಷಣ, ವಸತಿ ಸೌಲಭ್ಯ ಸೇರಿ ಬೆಳ್ತಂಗಡಿ ಸರ್ವಾಂಗೀಣ ಅಭಿವೃದ್ಧಿ ಪಥದತ್ತ ದಾಪುಗಾಲು ಇಡುತ್ತಿದೆ. ಮುಂದಿನ ದಿನಗಳಲ್ಲೂ ಮಾನ್ಯ ಮುಖ್ಯಮಂತ್ರಿಗಳಿಂದ ಇನ್ನಷ್ಟು ಕೊಡುಗೆಗಳು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಲಭ್ಯವಾಗಲಿವೆ ಎಂಬ ವಿಶ್ವಾಸದೊಂದಿಗೆ ಯಡಿಯೂರಪ್ಪರವರಿಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಶಕ್ತಿಯನ್ನು ತಾಲೂಕಿನ ದೈವ ದೇವರುಗಳು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಾಸಕರಾದ ಹರೀಶ್ ಪೂಂಜಾ ಶುಭಹಾರೈಸಿದ್ದಾರೆ.