ಬೆಳ್ತಂಗಡಿ: ಉಜಿರೆಯ ಲಾಯಿಲದಲ್ಲಿರುವ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾಡಲಾಗಿದ್ದು ಶಾಸಕ ಹರೀಶ್ ಪೂಂಜ ಹಾಗೂ ಪುತ್ತೂರು ಉಪ ವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಭೇಟಿ ನೀಡಿ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿದರು.
ಕೋವಿಡ್ ಕೇಂದ್ರ ಪರಿಶೀಲನೆಯ ಬಳಿಕ ಮಾತನಾಡಿದ ಶಾಸಕರು, ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬಳಕೆ ಮಾಡಲು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿಟ್ಟು ಕೊಟ್ಟಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ 50 ವೆಂಟಿಲೇಟರ್ ಹಾಸಿಗೆ ಇದೆ. ರೋಗ ಲಕ್ಷಣ ರಹಿತ ಸೋಂಕಿತರನ್ನು ತಾಲೂಕು ಆಸ್ಪತ್ರೆಯ ಅಧೀನದಲ್ಲಿ ದಾಖಲು ಮಾಡಿಕೊಂಡು ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿತರಿಗೆ ಇಲ್ಲಿಯೇ ಆಹಾರ ತಯಾರಿಸಿ ಕೊಡಲಾಗುವುದು. ಇದಕ್ಕೆ ಧರ್ಮಸ್ಥಳದಿಂದ ಸಹಕಾರ ನೀಡುತ್ತಾರೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಡಾ. ತಾರಕೇಶ್ವರಿ ಹಾಗೂ ಡಾ. ಅಭಿರಾಮ್ ಅವರನ್ನು ತಾಲೂಕು ಆಸ್ಪತ್ರೆಯಿಂದ ಮತ್ತು ಡಾ. ನಟೇಶ್ ಶರ್ಮ ಎಂಬವರನ್ನು ಹೊರಗುತ್ತಿಗೆ ಆಧಾರದಲ್ಲಿ ಇಲ್ಲಿ ನಿಯೋಜಿಸಲಾಗಿದೆ. ನರ್ಸ್‌ಗಳು, ಡಿ ಗ್ರೂಪ್ ನೌಕರರನ್ನು ತೆಗೆದುಕೊಂಡಿದ್ದೇವೆ. ಕೇಂದ್ರದಲ್ಲಿ ಸುಸಜ್ಜಿತವಾದ ಹಾಸಿಗೆಗಳ ವ್ಯವಸ್ಥೆ, ಅಡುಗೆ ಕೋಣೆ, ಸ್ನಾನಗೃಹ, ಶೌಚಾಲಯಗಳಿದೆ.
ಅಲ್ಲದೆ ಇಲ್ಲಿ ಸಂಪೂರ್ಣವಾಗಿ ಜನ ಜಾಗೃತಿ ವೇದಿಕೆ ಸಿಬ್ಬಂದಿ ಹಾಗೂ ಎಸ್ಕೆಡಿಆರ್ಡಿಪಿ ಯೋಜನೆಯ ವಿಪತ್ತು ನಿರ್ವಹಣ ಘಟಕದ ಸ್ವಯಂ ಸೇವಕರು ಕರ್ತವ್ಯ ನಿರ್ವಹಿಸುತ್ತಾರೆ. ಇದರ ಜೊತೆಗೆ ಹೆಗ್ಗಡೆಯವರು ಧರ್ಮಸ್ಥಳದಲ್ಲಿರುವ 300 ಕೊಠಡಿಗಳ 600 ಹಾಸಿಗೆಯ ರಜತಾದ್ರಿ ಅತಿಥಿ ಗೃಹವನ್ನು ಕ್ವಾರಂಟೈನ್ ಅಗತ್ಯಕ್ಕಾಗಿ ಬಳಸಿಕೊಳ್ಳುವಂತೆ ಸೂಚಿಸಿದ್ದಾರೆ. ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭ ಆಕ್ಸಿಜನ್ ಬೇಕಾದಲ್ಲಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗುವುದು. ಇದಕ್ಕಾಗಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಮಂಗಳೂರಿಗೆ ಕರೆದೊಯ್ಯಲು ಕೂಡ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.