ಮಂಗಳೂರು :ಪುತ್ತೂರು ತಾಲೂಕಿನ ಕಬಕ ಗ್ರಾಪಂ ಸ್ವಾತಂತ್ರ್ಯ ರಥದಲ್ಲಿ ಸಾವರ್ಕರ್ ಫೋಟೋ ತೆಗೆಯಬೇಕೆಂದು ದಾಂಧಲೆ ನಡೆಸಿರುವ ಎಸ್ಡಿಪಿಐ ಕಾರ್ಯಕರ್ತರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವೆ ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ಹೇಳಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಅಂಗವಾಗಿ ಪುತ್ತೂರು ತಾಲೂಕಿನ ಕಬಕ ಗ್ರಾಪಂ ವತಿಯಿಂದ ನಡೆದ ರಥಯಾತ್ರೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಭಾವಚಿತ್ರವನ್ನು ಅಳವಡಿಸಲಾಗಿತ್ತು. ಆದರೆ, ಕಬಕ ಗ್ರಾಪಂನ ಎಸ್ಡಿಪಿಐ ಸದಸ್ಯ ನಜೀರ್ ವಿರೋಧಿಸಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಇದರ ಜೊತೆಗೆ ಅಜೀದ್, ನೌಶಾದ್, ಅದ್ದು, ಸಮೀರ್ ಇವರುಗಳು ಪಂಚಾಯತ್ ಅಧ್ಯಕ್ಷ ಹಾಗೂ ಅಧ್ಯಕ್ಷರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಘಟನೆ ನಡೆಸಿದ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಸಚಿವರು ಹೇಳಿದರು.
ಘಟನೆ ಹಿನ್ನೆಲೆ :ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಲಿರುವ ಸ್ವಾತಂತ್ರ್ಯ ರಥಕ್ಕೆ ಕಬಕ ಗ್ರಾಪಂ ವಠಾರದಲ್ಲಿ ಅಧ್ಯಕ್ಷರು ಚಾಲನೆ ನೀಡಿ ಜೈಕಾರ ಹಾಕುತ್ತಿದ್ದಂತೆ ಎಸ್ಡಿಪಿಐ ಕಾರ್ಯಕರ್ತರು ಧಿಕ್ಕಾರ ಕೂಗಿದರು. ಬಳಿಕ ಸ್ವಾತಂತ್ರ್ಯ ರಥಕ್ಕೆ ತಡೆ ಉಂಟು ಮಾಡಿದರು.