ಕಡಬ:ಹೊರ ರಾಜ್ಯ, ಹೊರಜಿಲ್ಲೆ, ಬೆಂಗಳೂರಿನಿಂದ ಬಂದವರನ್ನು ಗುರುತಿಸಿ ಅಂತಹವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸಲು ವ್ಯವಸ್ಥೆ ಮಾಡಿ. ಇದಕ್ಕೆ ಸ್ಪಂದಿಸದೆ ಉಡಾಫೆಯಿಂದ ವರ್ತಿಸಿದರೆ ಅಂತಹವರ ವಿರುದ್ಧ ಯಾವುದೇ ವಿನಾಯಿತಿ ತೋರದೆ ಕಾನೂನು ಕ್ರಮ ಜರಗಿಸಬೇಕು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಚಿವ ಎಸ್. ಅಂಗಾರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸೋಮವಾರದಂದು ಕಡಬ ತಾಲೂಕಿನ ಜನಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಹಾಗು ಆಶಾ ಕಾರ್ಯಕರ್ತೆಯರಿಗಾಗಿ ನಡೆದ ಕೋವಿಡ್ ಮುಂಜಾಗ್ರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ಗ್ರಾಮದಲ್ಲಿ ಬಹಳಷ್ಟು ಮಂದಿ ಬೆಂಗಳೂರಿನಿಂದ ಬಂದವರಿದ್ದಾರೆ. ಅಂತಹವರು ಸದ್ಯ ಹೊರಗಡೆ ಹೋಗದೆ, ತಾವಾಗಿಯೇ ಮನೆಯಲ್ಲಿ ಕ್ವಾರಂಟೈನ್ ಆಗಬೇಕು, ಅದಲ್ಲದೇ ಅತ್ತಿತ್ತ ತಿರುಗಾಡುತ್ತಿದ್ದರೆ ಅಂತಹವರ ಮನೆ ಸಮೀಪದವರು ಪಂಚಾಯತ್ಗೆ ಮಾಹಿತಿ ನೀಡಲಿ. ಪಂಚಾಯತ್ನವರು ಅಂತಹವರ ಮನೆಗೆ ಹೋಗಿ ಕ್ವಾರಂಟೈನ್ ಆಗಲು ಸೂಚನೆ ನೀಡಿ, ಅದನ್ನು ಪಾಲಿಸದೇ ಇದ್ದಲ್ಲಿ ಅವರನ್ನು ನೇರವಾಗಿ ಕಡಬ ಅಥವಾ ಪುತ್ತೂರಿನ ಕೊರೊನಾ ಕೇಂದ್ರಗಳಲ್ಲಿ ಅಥವಾ ಸ್ಥಳೀಯವಾಗಿ ಶಾಲೆಗಳನ್ನೇ ಕೇಂದ್ರಗಳನ್ನಾಗಿ ಮಾಡಿ ಕ್ವಾರಂಟೈನ್ ಆಗುವಂತೆ ವ್ಯವಸ್ಥೆ ಮಾಡಬೇಕು ಎಂದರು.
ಕಳೆದ ಬಾರಿ ಕೋವಿಡ್ ಅಲೆ ಆರಂಭ ಆಗುತ್ತಿದ್ದಂತೆ ಜನರಲ್ಲಿ ಅದರ ಬಗ್ಗೆ ಭಯದ ಜತೆಗೆ ಜಾಗೃತಿ ಇತ್ತು. ಆದರೆ ಈ ಬಾರಿ ತೀರಾ ನಿರ್ಲಕ್ಷ್ಯತೆ ವಹಿಸುತ್ತಿರುವುದು ಕಂಡು ಬರುತ್ತಿದೆ. ಇದು ತೀರಾ ಅಪಾಯದ ಬೆಳವಣಿಗೆಯಾಗಿದ್ದು, ನಾವು ಜಾಗೃತರಾಗದಿದ್ದಲ್ಲಿ ದುಷ್ಪರಿಣಾಮವನ್ನು ಪ್ರತಿಯೋರ್ವರೂ ಕೂಡ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ:ಲಸಿಕೆ ಅಲಭ್ಯತೆ; 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಶನ್ ಮುಂದೂಡಿಕೆ?
ಸಿಬ್ಬಂದಿ ಕೊರತೆ ಇರುವ ಆರೋಗ್ಯ ಕೇಂದ್ರಗಳಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸಿಬ್ಬಂದಿಯ ನೇಮಕಾತಿ ಮಾಡಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ. 108 ತುರ್ತು ನಿಗಾ ಆಂಬ್ಯುಲೆನ್ಸ್ ಸಿಬ್ಬಂದಿ ವೇತನ ಸಮಸ್ಯೆ, ಆಂಬ್ಯುಲೆನ್ಸ್ ವಾಹನಗಳ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದೆ ಎಂದು ಸಚಿವರು ಹೇಳಿದರು. ಆಶಾ ಕಾರ್ಯಕರ್ತೆಯರ ಸಮಸ್ಯೆಗಳು, ರೇಶನ್ ವಿತರಣಾ ಅಂಗಡಿ ಸಮಸ್ಯೆ, ಕೊರೊನಾ ವಾರಿಯರ್ಸ್ಗಳಿಗೆ ವ್ಯಾಕ್ಸಿನೇಷನ್ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು, ಕಾರ್ಯಕರ್ತರು ಸಚಿವರ ಗಮನ ಸೆಳೆದರು.
ಕಡಬ ತಹಶೀಲ್ದಾರ್ ಅನಂತ ಶಂಕರ್, ತಾಲೂಕು ಪಂಚಾಯತ್ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾಲೂಕು ಪ್ರಭಾರ ವೈದ್ಯಾಧಿಕಾರಿ ಡಾ. ಅಶೋಕ್ ರೈ ಮಾತನಾಡಿ, ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರಿಗೆ ನೀಡಿರುವ ಜವಾಬ್ದಾರಿಗಳ ಬಗ್ಗೆ ತಿಳಿಸಿ, ಅಗತ್ಯ ಬಿದ್ದಲ್ಲಿ ಅಥವಾ ಸಮಸ್ಯೆಗಳು ಎದುರಾದಲ್ಲಿ ಮೇಲಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.