ಮಂಗಳೂರು: ಕೊರೊನಾ ಸೋಂಕಿನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ. ಉತ್ತರ ಭಾರತದ 40 ವರ್ಷದ ಕೂಲಿ ಕಾರ್ಮಿಕ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಇತ್ತೀಚೆಗೆ ನಗರದ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಇಂದು ಮೃತಪಟ್ಟಿದ್ದಾರೆ. ಇತರೆ ಖಾಯಿಲೆಗಳಿಂದಲೂ ಬಳಲುತ್ತಿದ್ದ ಇವರಿಗೆ ಕೊರೊನಾ ತಗುಲಿತ್ತು.
ಜಿಲ್ಲೆಯಲ್ಲಿ 3ಕ್ಕೇರಿದ ಸೋಂಕಿತ ಸಂಖ್ಯೆ:ಜಿಲ್ಲೆಯಲ್ಲಿ ಮತ್ತೆ ಎರಡು ಕೊರೊನಾ ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಗುರುವಾರ ತಿಳಿಸಿದ್ದರು. ಬುಧವಾರ 1 ಪ್ರಕರಣ ದೃಢಪಟ್ಟಿತ್ತು. ಉಡುಪಿ ಜಿಲ್ಲೆಯ ವೃದ್ಧರೊಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಸುಳ್ಯದ 83 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆಗೆ ದಾಖಲಾಗಿದ್ದ ವೇಳೆ ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಸೋಂಕು ದೃಢಪಟ್ಟಿತ್ತು. ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದರು.