ಪುತ್ತೂರು: ಮೈಕ್ರೋ ಫೈನಾನ್ಸ್ಗಳ ಅವ್ಯವಹಾರ, ದೌರ್ಜನ್ಯಗಳ ವಿರುದ್ಧ ರಾಜ್ಯಾದ್ಯಂತ ಸಾಲ ಸಂತ್ರಸ್ತೆಯರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಮೈಕ್ರೋ ಫೈನಾನ್ಸ್ಗಳ ಆರ್ಭಟ: ಸಾಲ ಸಂತ್ರಸ್ತ ಮಹಿಳೆಯರಿಂದ ಬೆಂಗಳೂರು ಚಲೋ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಪ್ರತಿಭಟನೆಯಲ್ಲಿ ಫೈನಾನ್ಸ್‌ಗಳು ಕಾನೂನು ಉಲ್ಲಂಘಿಸಿ ಮಾಡುವ ವ್ಯವಹಾರಗಳನ್ನು ಸ್ಥಗಿತಗೊಳಿಸಲು ಒತ್ತಾಯಿಸಲಾಗುವುದು. ಜೊತೆಗೆ ಸರ್ಕಾರಕ್ಕೆ ಈ ಫೈನಾನ್ಸ್ಗಳಿಗೆ ಮುಟ್ಟುಗೋಲು ಹಾಕಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಮೈಕ್ರೋ ಫೈನಾನ್ಸ್‌ಗಳು ಬಡ್ಡಿ ವ್ಯವಹಾರದ ಉದ್ದೇಶದಿಂದ ಯೋಜನೆಯ ಜಾರಿಯ ಹೆಸರಲ್ಲಿ ಸಾಲ ಮರುಪಾವತಿ ಮಾಡಲಾಗದ ರೀತಿಯಲ್ಲಿ ಸಿಕ್ಕಾಪಟ್ಟೆ ಸಾಲ ನೀಡಿ ಸಾಲದ ಕೂಪಕ್ಕೆ ತಳ್ಳಿದೆ. ಇನ್ನೊಂದೆಡೆ ಯೋಜನೆಯ ಉದ್ದೇಶ ಮರೆತು ಆರ್‌ಬಿ ಲೈಸನ್ಸ್ ಉಲ್ಲಂಘಿಸಿ ಕೈಸಾಲದ ರೂಪದಲ್ಲಿ ಯಾವುದೇ ಆಧಾರ ಇಲ್ಲದೆ ವೈಯಕ್ತಿಕ ಸಾಲ ನೀಡಿ ಒಂದೆಡೆ ದೇಶಕ್ಕೆ ಇನ್ನೊಂದೆಡೆ ಜನತೆಗೂ ಮೋಸ ಮಾಡಿದೆ. ಆದ್ದರಿಂದ ಬಡ ಮಹಿಳೆಯರು ಸಾಲ ಮರುಪಾವತಿಸಬೇಕಾದ ಅಗತ್ಯ ಇರುವುದಿಲ್ಲ. ಈ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ತನಿಖೆ ನಡೆಸಿ ಆದೇಶ ಮಾಡಬೇಕಿದೆ ಎಂದು ತಿಳಿಸಿದರು.
ಸಾಲ ವಸೂಲಾತಿಗಾಗಿ ಗೂಂಡಾ ಪ್ರವೃತ್ತಿಯವರಂತೆ ಮಹಿಳೆಯರ ಮನೆಗಳಿಗೆ ಬಂದು ನಿಂದಿಸುವ, ಅವಮಾನಿಸುವ ಕೃತ್ಯಗಳು ನಡೆಯುತ್ತಿವೆ. ಹೀಗಾಗಿ ಫೈನಾನ್ಸ್ ಸಿಬಂದಿಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು. ಈ ಫೈನಾನ್ಸ್ಗಳಿಗೆ ವ್ಯಾಪ್ತಿ, ಮಿತಿ ಯಾವುದೂ ಇಲ್ಲ. 2013ರ ಅನಂತರ ಸರ್ಕಾರಕ್ಕೆ ಸರಿಯಾದ ಲೆಕ್ಕವನ್ನೂ ಕೊಡದೆ ವ್ಯವಹರಿಸುತ್ತಿವೆ. ದ.ಕ. ಜಿಲ್ಲೆಯಲ್ಲಿ 500 ಕೋಟಿ ರೂ. ವ್ಯವಹಾರ ಎಂಬ ಲೆಕ್ಕವನ್ನು 2019ರಲ್ಲಿ ನೀಡಿದ್ದರೂ ಸಾವಿರಾರು ಕೋಟಿ ಸಾಲ ನೀಡಿದ ಈ ಫೈನಾನ್ಸ್ಗಳ ಉಳಿದ ಹಣದ ಮೂಲ ಯಾವುದು ಎಂಬುದು ಸಂಶಯವನ್ನುಟ್ಟುಮಾಡುತ್ತಿವೆ ಎಂದು ಆರೋಪಿಸಿದರು.
ಈಗಾಗಲೇ ಮೈಕ್ರೋ ಫೈನಾನ್ಸ್‌ಗಳು ಬಡ ಮಹಿಳೆಯರಿಗೆ 500ಕೋಟಿ ರೂಪಾಯಿ ಸಾಲ ವಿತರಿಸಿದೆ ಎಂದು ಫೈನಾನ್ಸ್ ಮೂಲಗಳು ತಿಳಿಸಿದ್ದರೂ, ನಮಗೆ ಬಂದ ಮಾಹಿತಿ ಪ್ರಕಾರ ಇದು 1500 ಕೋಟಿ ಆಗಿದೆ ಎಂದು ಸಂತ್ರಸ್ತರು ಆರೋಪಿಸಿದರು. ಈ ಹೆಚ್ಚುವರಿ ಹಣ ಎಲ್ಲಿಂದ ಬಂತು ಎಂಬುದು ತನಿಖೆಯಾಗಬೇಕು. ಮೈಕ್ರೋ ಫೈನಾನ್ಸ್ ದೌರ್ಜನ್ಯ ನಿಲ್ಲಿಸಬೇಕು, ಈಗಾಗಲೇ ನೀಡಿದ ಸಾಲವನ್ನು ಋಣಮುಕ್ತ ಕಾಯ್ದೆಯಡಿ ಸೇರಿಸಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.