ಮಂಗಳೂರು:ಲೋನ್ ಆ್ಯಪ್ ಮೂಲಕ ಸಾಲ ಪಡೆದ ಮಹಿಳೆಗೆ ಸಾಲ ಮರುಪಾವತಿಸಿದ ಬಳಿಕವೂ ಹೆಚ್ಚಿನ ಹಣಕ್ಕೆ ಒತ್ತಾಯಿಸಿ ನಗ್ನ ಪೊಟೋ ಹರಿಬಿಡುವ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ನೊಂದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಏಪ್ರಿಲ್ 15ರಂದು ಮಹಿಳೆ ಗೂಗಲ್ ಪ್ಲೇ ಸ್ಟೋರ್ನಿಂದ ಲೋನ್ ಆ್ಯಪ್ವೊಂದನ್ನು ಡೌನ್ಲೋಡ್ ಮಾಡಿ, ಅದರಲ್ಲಿ 10,000 ರೂಪಾಯಿ ಲೋನ್ಗೆ ಅಪ್ಲೈ ಮಾಡಿದ್ದರು. ಕೂಡಲೇ ಅವರ ಖಾತೆಗೆ 7,500 ರೂ. ಕ್ರೆಡಿಟ್ ಆಗಿತ್ತು. ಸ್ವಲ್ಪ ದಿನಗಳ ನಂತರ 10000 ರೂ.ಗಳನ್ನು ಮರು ಪಾವತಿ ಮಾಡಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಸಾಲ ತೀರಿಸಿದ ನಂತರದ ದಿನಗಳಲ್ಲಿಯೂ ವಿವಿಧ ವಾಟ್ಸ್ಆ್ಯಪ್ ನಂಬರ್ಗಳ ಮೂಲಕ ಮಹಿಳೆಗೆ ಪುನಃ ಕಡ್ಡಾಯವಾಗಿ ಮತ್ತೆ ಲೋನ್ ಪಡೆಯಬೇಕು ಎಂದು ಒತ್ತಾಯಿಸಿ ಅವರ ಖಾತೆಗೆ 14,000 ರೂ. ಕ್ರೆಡಿಟ್ ಮಾಡಿದ್ದಾರೆ. ಈ ಹಣವನ್ನು ಮಹಿಳೆ ಮರುಪಾವತಿ ಮಾಡಿದ್ದರು. ಆದರೆ, ಪಡೆದ ಹಣವನ್ನೆಲ್ಲ ಪಾವತಿಸಿದ ಬಳಿಕವೂ ಆ್ಯಪ್ನವರ ಕಿರುಕುಳ ಮುಂದುವರೆದಿದ್ದು, ವಿವಿಧ ಮೊಬೈಲ್ ನಂಬರ್ಗಳಿಂದ ಕರೆ ಮಾಡಿ ಹೆಚ್ಚಿನ ಹಣಕ್ಕೆ ಒತ್ತಾಯಿಸಿದ್ದಾರೆ. ಹೀಗೆ ಹಂತ ಹಂತವಾಗಿ ತನ್ನ ಕಡೆಯಿಂದ ಒಟ್ಟೂ 51,000 ರೂ.ಗಳನ್ನು ಆ್ಯಪ್ನವರು ಹಾಕಿಸಿಕೊಂಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ನಂತರವೂ ಕೂಡ ಮಹಿಳೆಗೆ ವಿವಿಧ ನಂಬರ್ಗಳಿಂದ ಕರೆ ಮಾಡಿ ಹಣಕ್ಕಾಗಿ ಬೆದರಿಕೆ ಹಾಕಿದ್ದು, ಮಹಿಳೆಯ ಫೋಟೋವನ್ನು ಓರ್ವ ಹುಡುಗನೊಂದಿಗೆ ನಗ್ನವಾಗಿ ಇರುವ ರೀತಿಯಲ್ಲಿ ಎಡಿಟ್ ಮಾಡಿ ಕಳುಹಿಸಿದ್ದಾರೆ. ಹಣ ಕಳಿಸದಿದ್ದರೆ ಫೋಟೋವನ್ನು ಸಂಬಂಧಿಕರು ಹಾಗೂ ಇತರರಿಗೆ ಕಳುಹಿಸಲಾಗುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ನೊಂದ ಮಹಿಳೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಸೈಬರ್ ಅಪರಾಧಿಗಳ ಕೈಗೆ ಸಿಲುಕಿ ನರಳಾಡಿದ ವೃದ್ಧ.. 17 ಲಕ್ಷ ರೂಪಾಯಿ ಪಂಗನಾಮ ಹಾಕಿದ ವಂಚಕರು!
ಪ್ರತ್ಯೇಕ ಪ್ರಕರಣ- ಅಂಗಡಿಗಳ ಟ್ರೇಡ್ ಲೈಸೆನ್ಸ್ ರದ್ದು ಮಾಡುವಂತೆ ಪೊಲೀಸರ ಪತ್ರ: ಅಕ್ರಮವಾಗಿ ಇ ಸಿಗರೇಟ್ ಮತ್ತು ವಿದೇಶಿ ಸಿಗರೇಟ್ ಮಾರಾಟ ಮಾಡುತ್ತಿದ್ದ ಮೂರು ಅಂಗಡಿಗಳ ಟ್ರೇಡ್ ಲೈಸೆನ್ಸ್ ರದ್ದುಪಡಿಸುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ಪೊಲೀಸರು ಪತ್ರ ಬರೆದಿದ್ದಾರೆ. ಆಗಸ್ಟ್ 21ರಂದು ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯ ಮೂರು ಅಂಗಡಿಗಳ ಮೇಲೆ ದಾಳಿ ಮಾಡಲಾಗಿತ್ತು. ಇಲ್ಲಿ ನಿಷೇಧಿತ ಇ-ಸಿಗರೇಟ್ ಮತ್ತು ಇತರ ವಿದೇಶಿ ಸಿಗರೇಟ್‌ಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬರ್ಕೆ ಠಾಣೆ ಪೊಲೀಸರು ದಾಳಿ ನಡೆಸಿ ನಿಷೇಧಿತ ಸಿಗರೇಟ್ ಮಾರುತ್ತಿದ್ದ ಆರೋಪಿಗಳನ್ನು ಬಂಧಿಸಿ, ಅಂದಾಜು 2,70,000 ರೂ. ಮೌಲ್ಯದ ಸಿಗರೇಟ್ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಿದಾಗ ಆರೋಪಿಗಳು ಈ ಹಿಂದೆಯೂ ಕೂಡ ಅಂಗಡಿಗಳಲ್ಲಿ ಇ-ಸಿಗರೇಟ್ ಹಾಗೂ ವಿದೇಶಿ ಸಿಗರೇಟ್ ಮಾರಾಟ ಮಾಡಿರುವುದು ಗೊತ್ತಾಗಿದೆ. ಆರೋಪಿತರ ಈ ಪುನರಾವರ್ತಿತ ಪ್ರಕರಣ ಸಂಬಂಧ, ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಂಗಡಿಗಳ ಟ್ರೇಡ್ ಲೈಸನ್ಸ್ ರದ್ದುಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗಿದೆ.