ಮಂಗಳೂರು:ಮಂಗಳೂರು ವಿಶ್ವವಿದ್ಯಾನಿಲಯದ 39ನೇ ವಾರ್ಷಿಕ ಘಟಿಕೋತ್ಸವ ಏಪ್ರಿಲ್ 10 ರಂದು ನಡೆಯಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ವಾರ್ಷಿಕ ಘಟಿಕೋತ್ಸವ ಏ.10 ರಂದು ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಮಂಗಳ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿಯವರು ವರ್ಚುವಲ್ ಮುಖಾಂತರ ಮುಖ್ಯ ಅತಿಥಿಯಾಗಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಈ ವರ್ಷದಲ್ಲಿ ಯಾವುದೇ ಗೌರವ ಡಾಕ್ಟರೇಟ್ ನೀಡಲಾಗುವುದಿಲ್ಲ. ಕೊರೊನಾ ಕಾರಣದಿಂದ ಗೌರವ ಡಾಕ್ಟರೇಟ್ ನೀಡಲು ಮಾಡಬೇಕಾದ ಕ್ರಮಗಳನ್ನು ಅನುಸರಿಸಲು ಆಗಿಲ್ಲ ಎಂದರು.
ಮಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 117 ವಿದ್ಯಾರ್ಥಿಗಳಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್ಡಿ) ನೀಡಲಾಗುತ್ತಿದೆ. ಇದರಲ್ಲಿ 14 ವಿದೇಶಿ ವಿದ್ಯಾರ್ಥಿಗಳಿದ್ದಾರೆ. ಒಂದು ಮಹಿಳಾ ಮತ್ತು 13 ಪುರುಷ ವಿದೇಶಿ ವಿದ್ಯಾರ್ಥಿಗಳು ಪದವಿ ಪಡೆದುಕೊಳ್ಳಲಿದ್ದಾರೆ. ಹತ್ತು ಮಂದಿಗೆ ಚಿನ್ನದ ಪದಕ, 101 ಮಂದಿಗೆ ನಗದು ಬಹುಮಾನ ಮತ್ತು 188 ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡಲಾಗುತ್ತಿದೆ ಎಂದರು.