ಮಂಗಳೂರು : ಮಂಗಳೂರಿನ ಸಂಘನಿಕೇತನದಲ್ಲಿ ಈ ಬಾರಿ 76ನೇ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಸೌಹಾರ್ದತೆಯ ಸಂದೇಶವನ್ನು ಸಾರಿದೆ. ಮಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ಗಣೇಶೋತ್ಸವವು ಸಂಘನಿಕೇತನದಲ್ಲಿ ಆರಂಭವಾಗಿತ್ತು. ಆರ್ಎಸ್ಎಸ್ನ ಮಂಗಳೂರು ಕಚೇರಿಯಲ್ಲಿ ನಡೆಯುವ ಈ ಗಣೇಶೋತ್ಸವಕ್ಕೆ ಕೆಲವು ವರ್ಷಗಳಿಂದ ಸೌಹಾರ್ದತೆಯ ಸ್ಪರ್ಶ ಸಿಕ್ಕಿವೆ.
2007ರಿಂದ ಸಂಘನಿಕೇತನದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ಸಮಾರಂಭಕ್ಕೆ ಕ್ರಿಶ್ಚಿಯನ್ ಬಂಧುಗಳು ಬಂದು ಪೂಜೆ ಸಲ್ಲಿಸುವುದು ನಡೆಯುತ್ತಿದೆ. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸದಸ್ಯರು ಸಾಮರಸ್ಯ ಹಾಗೂ ಸೌಹಾರ್ದತೆಯ ಗಣೇಶೋತ್ಸವದ ಭೇಟಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅದರಂತೆ ಈ ಬಾರಿಯೂ ಸಂಘನಿಕೇತನದ ಗಣೇಶೋತ್ಸವಕ್ಕೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸದಸ್ಯರು ಬಂದು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘನಿಕೇತನದಿಂದ ಕ್ರೈಸ್ತ ಬಾಂಧವರಿಗೆ ಪ್ರಸಾದ ವಿತರಣೆಯು ನಡೆಯಿತು. ಆ ಬಳಿಕ ಗಣೇಶೋತ್ಸವದ ಆಯೋಜಕರು ಹಾಗೂ ಕ್ರೈಸ್ತ ಬಾಂಧವರು ಜೊತೆಯಾಗಿ ಕುಳಿತು ಉಪಹಾರ ಸೇವಿಸಿದರು. ಇದೇ ವೇಳೆ ಮಾತನಾಡಿದ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ಟಲಿನೊ, ಗಣೇಶೋತ್ಸವ ಒಂದು ರಾಷ್ಟ್ರೀಯ ಹಬ್ಬ. ಗಣೇಶೋತ್ಸವವನ್ನು ಬಾಲಗಂಗಾಧರ ತಿಲಕ್ ಆರಂಭಿಸಿದ್ದು ಸ್ವಾತಂತ್ರ್ಯ ಸಂದರ್ಭದಲ್ಲಿ ಜನರನ್ನು ಒಟ್ಟು ಸೇರಿಸಲು. ಈ ಹಬ್ಬ ದೊಡ್ಡ ಚಳವಳಿಯಾಗಿದೆ. ಗಣೇಶ ವಿಘ್ನ ನಿವಾರಕ. ಹಿಂದೂಗಳು ಮಾತ್ರವಲ್ಲದೆ ಎಲ್ಲರೂ ಯಾವುದೆ ಕೆಲಸ ಆರಂಭಿಸಲು ಗಣೇಶನ ಪೂಜೆ ಮಾಡುವುದು ರೂಢಿಯಾಗಿದೆ ಎಂದರು.