ಮಂಗಳೂರು: ಎಷ್ಟು ಹಿಂಡಿದರೂ ಸಿಹಿ ಒಸರುವ ಕಬ್ಬು ಈ ಬಾರಿ ಬೆಳೆಗಾರನಿಗೆ ಮಾತ್ರ ಕಹಿ ಒಸರುವ ಭೀತಿ ಎದುರಾಗಿದೆ. ವಾರದ ಅಂತರದಲ್ಲಿ ಗಣೇಶ ಚತುರ್ಥಿ ಇದ್ದರೂ ಇನ್ನೂ ಕಬ್ಬಿಗೆ ಬೇಡಿಕೆ ಬಂದಿಲ್ಲ.
ಚತುರ್ಥಿ ಸಮೀಪಿಸಿದರೂ ಬಾರದ ಬೇಡಿಕೆ: ಕಬ್ಬು ಬೆಳೆದ ರೈತ ಕಂಗಾಲು ಮಂಗಳೂರು ತಾಲೂಕಿನ ಹೊರವಲಯದಲ್ಲಿರುವ ಬಳ್ಕುಂಜೆ ಎಂಬ ಗ್ರಾಮದಲ್ಲಿ ಗಣೇಶ ಚತುರ್ಥಿಗೆಂದೇ ಕಬ್ಬು ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಲ್ಲಿನ ಕಬ್ಬಿಗೆ ಸಾಕಷ್ಟು ಬೇಡಿಕೆಯೂ ಇದೆ. ಗಣೇಶ ಚತುರ್ಥಿಯ ವ್ಯಾಪಾರವನ್ನು ದೃಷ್ಟಿಯಲ್ಲಿರಿಸಿಕೊಂಡು ಇಲ್ಲಿನ ರೈತರು ಕಬ್ಬು ಬೆಳೆಯುತ್ತಾರೆ.
ಬಳ್ಕುಂಜೆಯಲ್ಲಿ ಸುಮಾರು 45 ರೈತ ಕುಟುಂಬಗಳು ಕಬ್ಬು ಬೆಳೆಯನ್ನೇ ಅವಲಂಬಿಸಿದೆ. ಡಿಸೆಂಬರ್ ಸಮಯಕ್ಕೆ ಕಬ್ಬು ನಾಟಿ ಮಾಡಿದರೆ ಆಗಸ್ಟ್- ಸೆಪ್ಟೆಂಬರ್ ಮಧ್ಯೆ ಕಟಾವು ಮಾಡಲು ಕಬ್ಬು ಲಭ್ಯವಾಗುತ್ತದೆ. ಆದರೆ ಈ ಬಾರಿ ಏಳೆಂಟು ತಿಂಗಳ ರೈತರ ಪರಿಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ. ಗಣೇಶ ಚತುರ್ಥಿ ಹತ್ತಿರ ಬಂದರೂ ಇನ್ನೂ ಕಬ್ಬಿಗೆ ಮಧ್ಯವರ್ತಿಗಳಿಂದ ಬೇಡಿಕೆ ಬಂದಿಲ್ಲ. ಕಷ್ಟಪಟ್ಟು ಬೆಳೆದ ಫಸಲು ಚೆನ್ನಾಗಿ ಬಂದಿದ್ದರೂ ಕೈಗೆ ಕಾಸು ಬಾರದೆ ರೈತರು ಕಂಗಾಲಾಗಿದ್ದಾರೆ.
ಈ ಬಗ್ಗೆ ಕಬ್ಬು ಬೆಳೆಗಾರ ಗೋಪಾಲ ಭಂಡಾರಿ ಮಾತನಾಡಿ, ಸುಮಾರು 15 ಎಕರೆ ಗದ್ದೆಯಲ್ಲಿ 3 ಲಕ್ಷಕ್ಕೂ ಅಧಿಕ ಕಬ್ಬು ಬೆಳೆದು ನಿಂತಿದೆ. ಚಿನ್ನಾಭರಣ ಅಡವಿಟ್ಟು, ಆಸ್ತಿ ಅಡವಿಟ್ಟು ಕಬ್ಬು ಬೆಳೆದಿದ್ದೇವೆ. ನಮ್ಮ ಬಳ್ಕುಂಜೆ ಪರಿಸರದ ರೈತರ ಜೀವನಾಧಾರವೇ ಕಬ್ಬು. ಆದರೆ ಈ ಬಾರಿ ಕೊರೊನಾ ಭೀತಿಯಿಂದ ಯಾರೂ ಕಬ್ಬು ಕೊಳ್ಳಲು ಮುಂದೆ ಬರುತ್ತಿಲ್ಲ. ಇದರಿಂದ ಇಲ್ಲಿನ ಕಬ್ಬು ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಹೇಳಿದರು.