ಮಂಗಳೂರು :ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಗುಡ್ಡೆಯಲ್ಲಿನ ಗೋಳಿತ್ತೊಟ್ಟು ಎಂಬಲ್ಲಿ ಮಾರ್ಚ್ 25ರಂದು ನಡೆದ ಲಾರಿ ದರೋಡೆ ಪ್ರಕರಣವನ್ನು ಕೊನೆಗೂಪೊಲೀಸರು ಬೇಧಿಸಿದ್ದಾರೆ. ತಾನೇ ಲಾರಿ ದರೋಡೆ ಮಾಡಿ ಕಥೆ ಕಟ್ಟಿದೆ ಎಂದು ಲಾರಿ ಚಾಲಕವೇ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ.
ಪ್ರಕರಣದ ಹಿನ್ನೆಲೆ :
ಪಾಂಡವಪುರದ ನಿವಾಸಿ ಅಂಬರೀಷ್ ಎಂಬಾತ ತನ್ನ ಲಾರಿಗೆ ತಾನೇ ಚಾಲಕನಾಗಿ ದುಡಿಯುತ್ತಿದ್ದ. ಈ ಲಾರಿಯಲ್ಲಿ ಹಿಂದೂಸ್ತಾನ್ ಲಿವರ್ ಕಂಪೆನಿಯ ಸೋಪು, ಶ್ಯಾಂಪೂ, ಟೀ ಪುಡಿ, ಕಾಫೀ ಪುಡಿಗಳನ್ನು ಡೆಲಿವರಿ ಮಾಡುತ್ತಿದ್ದ. ವಿಪರೀತ ಸಾಲ ಮಾಡಿದ್ದ ಈತ ಸಾಲ ತೀರಿಸಲು ನಾಟಕವೊಂದನ್ನು ತಾನೇ ಸೃಷ್ಟಿ ಮಾಡಿದ್ದ.
ಮಾ.25 ರಂದು ಶಿರಾಡಿಗುಡ್ಡೆಯ ಗೋಳಿತ್ತಟ್ಟು ಎಂಬಲ್ಲಿ ಸಾಮಾನು ಹೇರಿದ್ದ ಲಾರಿ ಹೋಗುತ್ತಿರುವಾಗ, ಮಧ್ಯರಾತ್ರಿ 2.30ರಿಂದ 3 ಗಂಟೆಯ ಹೊತ್ತಿಗೆ ಇಂಡಿಕಾ ಕಾರೊಂದು ಹಿಂದಿನಿಂದ ಬಂದು ಅಡ್ಡಗಟ್ಟಿತ್ತು. ಬಳಿಕ ಕಾರಿನಿಂದ ಇಳಿದ ಇಬ್ಬರು ಲಾರಿ ಹತ್ತಿ, ನನಗೆ ಹಲ್ಲೆ ನಡೆಸಿ ಹಗ್ಗದಿಂದ ನನ್ನ ಕೈಕಾಲು ಕಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ, ತನ್ನಲ್ಲಿದ್ದ 5,200 ರೂ. ನಗದು, 2 ಸಾವಿರ ರೂ. ಮೌಲ್ಯದ ಮೊಬೈಲ್ ಹಾಗೂ ಲಾರಿಯಲ್ಲಿದ್ದ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ಲಾರಿ ಚಾಲಕ ಅಂಬರೀಷ್ ದೂರು ನೀಡಿದ್ದನು.
ಈ ಹಿನ್ನೆಲೆಯಲ್ಲಿ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು. ಲಾರಿ ಕಳವಾಗಿದೆ ಎಂದು ದೂರು ನೀಡಿದವನೇ ನಿಜವಾದ ಆರೋಪಿ ಎಂದು ತೀವ್ರ ಅನುಮಾನಗೊಂಡು ಆತನನ್ನೇ ವಿಚಾರಣೆಗೊಳಪಡಿಸಿದಾಗ ನಿಜಾಂಶ ಬೆಳಕಿಗೆ ಬಂದಿದೆ.
ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಸ್ವತಃ ಈತನೇ ಲಾರಿಯಲ್ಲಿದ್ದ ವಸ್ತುಗಳನ್ನು ದರೋಡೆ ಮಾಡಿ, ತನ್ನ ಕೈಕಾಲುಗಳನ್ನು ತಾನೇ ಕಟ್ಟಿ ದರೋಡೆ ನಾಟಕವಾಡಿದ್ದ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಲಾರಿಯಲ್ಲಿದ್ದ ವಸ್ತುಗಳನ್ನು ಮಾರಾಟ ಮಾಡಿ ಬಂದಿರುವ 51,500 ರೂ. ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿ ಅಂಬರೀಷ್ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.