ಮಂಗಳೂರು:ಚಿನ್ನಾಭರಣದ ಅಂಗಡಿಯೊಂದರ ಸಿಬ್ಬಂದಿಯನ್ನು ಹತ್ಯೆೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಮಂಗಳೂರು ಜ್ಯುವೆಲ್ಲರ್ಸ್ನಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಆಚಾರ್ಯ ಎಂಬುವರನ್ನು ಹತ್ಯೆಗೈದ ಪ್ರಕರಣದಲ್ಲಿ ಆರೋಪಿಯನ್ನು ಒಂದು ತಿಂಗಳ ಬಳಿಕ ಕೇರಳದಲ್ಲಿ ಪತ್ತೆ ಹಚ್ಚಲಾಗಿದೆ. ಕೋಝಿಕ್ಕೋಡ್ನ ಚೇಮಂಚೇರಿಯ ತುವಕೋಡ್ ನಿವಾಸಿ ಶಿಫಾಸ್ (30) ಬಂಧಿತ ಆರೋಪಿ.
ಪ್ರಕರಣದ ವಿವರ: ಫೆ.3 ರಂದು ಅಪರಿಚಿತ ವ್ಯಕ್ತಿಯೊಬ್ಬ ಮಂಗಳೂರು ಜ್ಯುವೆಲ್ಲರ್ಸ್ ಹೆಸರಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಆಚಾರ್ಯ ಎಂಬುವರನ್ನು ಹತ್ಯೆ ಮಾಡಿದ್ದ. ಕೊಲೆ ಕೃತ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಕೇಶವ ಆಚಾರ್ಯ ಎಂಬವವರಿಗೆ ಸೇರಿದ ಜ್ಯುವೆಲ್ಲರ್ಸ್ನಲ್ಲಿ ಘಟನೆ ನಡೆದಿತ್ತು. ಕೇಶವ ಆಚಾರ್ಯ ಮಧ್ಯಾಹ್ನ ಊಟಕ್ಕೆ ಹೋಗಿದ್ದು, ಈ ಸಂದರ್ಭದಲ್ಲಿ ರಾಘವೇಂದ್ರ ಮಳಿಗೆಯಲ್ಲಿ ಒಬ್ಬರೇ ಇದ್ದರು. ಊಟ ಮುಗಿಸಿ ಆಚಾರ್ಯ ಜ್ಯುವೆಲ್ಲರ್ಸ್ಗೆ ಬಂದಾಗ ಅವರ ಕಾರು ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಅಡ್ಡವಾಗಿ ಬೈಕ್ ನಿಲ್ಲಿಸಲಾಗಿತ್ತು. ಅದನ್ನು ಸರಿಪಡಿಸುವಂತೆ ಕೇಶವ್ ಆಚಾರ್ಯ ಸಿಬ್ಬಂದಿ ರಾಘವ ಆಚಾರ್ಯಗೆ ಕರೆ ಮಾಡಿದ್ದರು.
ಆಗ ರಾಘವ ಆಚಾರ್ಯ ತನ್ನ ಮೇಲೆ ಹಲ್ಲೆಯಾಗುತ್ತಿದೆ ಎಂದು ಕಿರುಚಾಡಿದ್ದರು. ಈ ಸಂದರ್ಭ ಕೇಶವ ಆಚಾರಿ ಒಳಗೆ ಹೋದಾಗ ಅಲ್ಲಿಂದ ಆರೋಪಿ ಹೊರ ಓಡಿ ಬಂದಿದ್ದ. ಅಲ್ಲದೇ ಘಟನೆ ಬಳಿಕ ಅಂಗಡಿಯಲ್ಲಿ ಪ್ರದರ್ಶಿಸಲಾಗಿದ್ದ ಕೆಲವೊಂದು ಚಿನ್ನದ ವಸ್ತಗಳು ಕಾಣೆಯಾಗಿರುವ ಬಗ್ಗೆ ಕೇಶವ ಆಚಾರ್ಯ ಪೊಲೀಸರಿಗೆ ತಿಳಿಸಿದ್ದರು. ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಬಂದು ವಿಚಾರಣೆ ನಡೆಸಿದ್ದರು. ಸಮೀಪದ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಶಂಕಿತ ವ್ಯಕ್ತಿ ಕಾಣಿಸಿಕೊಂಡಿದ್ದ. ಇದನ್ನು ಆಧಾರವಾಗಿರಿಸಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಘಟನೆ ನಡೆದು ಒಂದು ತಿಂಗಳಾದರೂ ಆರೋಪಿ ಪತ್ತೆಯಾಗಿರಲಿಲ್ಲ.