ಮಂಗಳೂರು: ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣದ ಕುರಿತು ತಾವು ಸತ್ಯ ಶೋಧನೆ ನಡೆಸಿ ಕಲೆಹಾಕಿದ ಮಾಹಿತಿ ಸಂಬಂಧ ಸುದ್ದಿಗೋಷ್ಠಿ ನಡೆಸಲು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ನೇತೃತ್ವದ ತಂಡಕ್ಕೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ.
ನಗರದಲ್ಲಿ ಡಿ.19ರಂದು ನಡೆದ ಗೋಲಿಬಾರ್ ಹಾಗೂ ಹಿಂಸಾಚಾರ ಪ್ರಕರಣದ ಕುರಿತು, ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಾಧೀಶ ಗೋಪಾಲಗೌಡ ನೇತೃತ್ವದ ತಂಡ, ಸತ್ಯಶೋಧನೆ ನಡೆಸಲು ಮಂಗಳೂರಿಗೆ ಆಗಮಿಸಿದ್ದು, ಈ ತಂಡ ಇಂದು ಸುದ್ದಿಗೋಷ್ಠಿ ನಡೆಸಲು ಉದ್ದೇಶಿಸಿತ್ತು.
ಈ ತಂಡ ಗೋಲಿಬಾರ್ನಲ್ಲಿ ಮೃತಪಟ್ಟ ಜಲೀಲ್ ಸಂಬಂಧಿಕರು, ಆಸ್ಪತ್ರೆಯಲ್ಲಿರುವ ಗಾಯಾಳುಗಳನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಿ, ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಲು ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ ಎಂದು ತಂಡ ಬೇಸರ ವ್ಯಕ್ತಪಡಿಸಿದೆ.
ಈ ಬಗ್ಗೆ ತಂಡದ ಸದಸ್ಯ, ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಮಾತನಾಡಿ, ಮಂಗಳೂರು ಗೋಲಿಬಾರ್ ಪ್ರಕರಣದ ಕುರಿತು ತಾವು ಕಲೆ ಹಾಕಿದ ಮಾಹಿತಿಗಳನ್ನು ಸುದ್ದಿಗಾರರಿಗೆ ತಿಳಿಸಲು ಹಾಗೂ ಸುದ್ದಿಗೋಷ್ಠಿ ನಡೆಸಲು ಪೊಲೀಸ್ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ. ಒಬ್ಬ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶನಿಗೆ ಸುದ್ದಿಗಾರರೊಂದಿಗೆ ಪತ್ರಿಕಾ ಸಭೆ ನಡೆಸಲು ಸ್ವಾತಂತ್ರ್ಯ ಈ ದೇಶದಲ್ಲಿ ಇಲ್ಲವೆಂದಾದರೆ, ಸಾಮಾನ್ಯ ಜನರ ಪರಿಸ್ಥಿತಿ ಏನಾಗಿರಬಹುದು ಎಂದು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ನಿನ್ನೆ ಕೂಡಾ ನಾವು ಸತ್ಯ ಶೋಧನೆ ನಡೆಸಿರುವವರ ಮೇಲೆ ಯಾವುದೇ ಮಾಹಿತಿ ನೀಡಬಾರದೆಂಬ ಒತ್ತಡ ತರಲಾಗಿತ್ತು. ಆದರೂ ಜನರು ನಮಗೆ ಸಹಕರಿಸಿದ್ದಾರೆ. ನಾವು ನಡೆಸಿರುವ ಸತ್ಯ ಶೋಧನೆಯ ಬಗ್ಗೆ ಆದಷ್ಟು ಬೇಗ ಎಲ್ಲರಿಗೂ ತಿಳಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಹೇಳಿದರು. ಈ ವೇಳೆ ನ್ಯಾಯವಾದಿ ಬಿ.ಟಿ.ವೆಂಕಟೇಶ್ ಜೊತೆಗಿದ್ದರು.