ಮಂಗಳೂರು(ದಕ್ಷಿಣಕನ್ನಡ) : ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ಪ್ರಸಿದ್ಧ ಮಂಗಳೂರು ದಸರಾಕ್ಕೆ ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿಯವರು ಅದ್ಧೂರಿ ಚಾಲನೆ ನೀಡಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶ್ರೀ ಮಹಾಗಣಪತಿ, ನವದುರ್ಗೆಯರ ಸಹಿತ ಶ್ರೀಶಾರದಾ ಮಾತೆಯ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾ ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ವೇಳೆ ಸಾವಿರಾರು ಮಂದಿ ಭಕ್ತರು ಆಗಮಿಸಿ, ಶ್ರೀಶಾರದಾ ಮಾತೆ ಸಹಿತ ನವದುರ್ಗೆ,ಶ್ರೀಮಹಾಗಣಪತಿಯ ದರ್ಶನ ಪಡೆದು ಪುಳಕಿತರಾದರು.
ಮಂಗಳೂರು ದಸರಾಕ್ಕೆ ಅದ್ದೂರಿ ಚಾಲನೆ : ನವದುರ್ಗೆಯರೊಂದಿಗೆ ಶಾರದಾ ಮಾತೆಯ ಪ್ರತಿಷ್ಠಾಪನೆ ಇಂದಿನಿಂದ ಆರಂಭವಾದ ಮಂಗಳೂರು ದಸರಾ ಸಮಾರಂಭವು ಅಕ್ಟೋಬರ್ 6ರವರೆಗೆ ನಡೆಯಲಿದೆ. ಅಕ್ಟೋಬರ್ 5ರ ಸಂಜೆ 4ಗಂಟೆಗೆ ವಿಸರ್ಜನಾ ಪೂಜೆ ನೆರವೇರಿದ ಬಳಿಕ ರಾತ್ರಿ ಪೂರ್ತಿ ಮಂಗಳೂರಿನ ರಾಜಬೀದಿಗಳಲ್ಲಿ ವೈಭವದ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಬಳಿಕ ಶ್ರೀಶಾರದಾ ಮಾತೆ ಸಹಿತ ನವದುರ್ಗೆಯರು, ಶ್ರೀಮಹಾಗಣಪತಿಯ ಮೂರ್ತಿಯನ್ನು ಶ್ರೀಕ್ಷೇತ್ರ ಕುದ್ರೋಳಿಯ ಕೆರೆಯಲ್ಲಿ ವಿಸರ್ಜನೆ ಮಾಡುವುದರೊಂದಿಗೆ ಸಂಪನ್ನಗೊಳ್ಳಲಿದೆ.
ಇದನ್ನೂ ಓದಿ :ಪ್ರವಾಸೋದ್ಯಮ ಇಲಾಖೆ ವೆಬ್ ಸೈಟ್ನಲ್ಲಿ ದೈವಾರಾಧನೆಗೆ ಅಪಮಾನ: ಟ್ರೋಲ್ ಬಳಿಕ ಪೇಜ್ ಡಿಲೀಟ್