ಉಳ್ಳಾಲ(ದಕ್ಷಿಣ ಕನ್ನಡ):ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ರಕ್ಷಿಸಲು ಹೋದ ಆಕೆಯ ಸ್ನೇಹಿತ ಸಮುದ್ರಪಾಲದ ಘಟನೆ ನಿನ್ನೆ(ಶುಕ್ರವಾರ) ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ.
ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿ.ಸೋಜಾ (28) ಮೃತ ಯುವಕ. ಈತನ ಸ್ನೇಹಿತೆ ಅಶ್ವಿತಾ ಫೆರಾವೋರನ್ನು ಸ್ಥಳೀಯ ಜೀವ ರಕ್ಷಕ ಈಜುಗಾರರು ರಕ್ಷಿಸಿದ್ದಾರೆ. ಸದ್ಯ ಆಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಲಾಯ್ಡ್ ಡಿ.ಸೋಜಾ ಅಶ್ವಿತಾಳನ್ನು ಕಳೆದ 8 ವರ್ಷದಿಂದ ಪ್ರೀತಿಸುತ್ತಿದ್ದನಂತೆ. ಆದರೆ, ಈ ನಡುವೆ ಲಾಯ್ಡ್ ಇನ್ನೊರ್ವ ಯುವತಿಯನ್ನು ಪ್ರೀತಿಸುತ್ತಿದ್ದಾನೆ ಎಂದು ಅಶ್ವಿತಾಳ ಆರೋಪವಾಗಿತ್ತು. ಈ ಹಿನ್ನೆಲೆ ಮಾತುಕತೆಗೆ ಸೋಮೇಶ್ವರ ಸಮುದ್ರ ತೀರಕ್ಕೆ ಬಂದಿದ್ದರು. ಈ ವೇಳೆ, ಲಾಯ್ಡ್ ಮತ್ತು ಅಶ್ವಿತಾಳ ನಡುವೆ ಮಾತಿನ ಚಕಮಕಿ ನಡೆದು, ಆಕೆ ಸಮುದ್ರಕ್ಕೆ ಹಾರಿದ್ದಾಳೆ. ಆಕೆಯನ್ನು ರಕ್ಷಿಸುವ ಭರದಲ್ಲಿ ಲಾಯ್ಡ್ ಕೂಡ ಸಮುದ್ರಕ್ಕೆ ಹಾರಿದ್ದಾನೆ.
ಸ್ಥಳೀಯ ಜೀವ ರಕ್ಷಕರಾದ ಅಶೋಕ್ ಮತ್ತು ಅವರ ತಂಡ ಅಶ್ವಿತಾಳನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ. ಆದರೆ, ಲಾಯ್ಡ್ ಡಿಸೋಜಾ ಸಮುದ್ರದಲ್ಲಿ ಮುಳುಗಿದ್ದು, ಆತನನ್ನು ರಕ್ಷಣೆಗೆ ಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೋಟ್ ದುರಂತ: ಇಬ್ಬರು ಅಪ್ರಾಪ್ತರು ನಾಪತ್ತೆ, 10 ಮಂದಿ ರಕ್ಷಣೆ