ಮಂಗಳೂರು :ರಾತ್ರಿ ಹೊತ್ತು ಅಂಗಡಿಗಳ ಬೀಗ, ಕಿಟಕಿ ಸರಳು ಮುರಿದು ಕಳವು ಮಾಡ್ತಿದ್ದ ಖದೀಮನಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ಕು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಸೆಲ್ವ ಕುಮಾರ್ ಅಲಿಯಾಸ್ ರಮೇಶ್(35) ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ.
ಪ್ರಕರಣದ ವಿವರ :2017 ಏಪ್ರಿಲ್ 2ರಂದು ಕದ್ರಿ ಪೊಲೀಸರು ನಗರದ ಕಂಕನಾಡಿ ಬಳಿ ಬೆಳಗ್ಗಿನ ಜಾವ ಗಸ್ತಿನಲ್ಲಿದ್ದಾಗ ಸೆಲ್ವಕುಮಾರ್ ಅಲಿಯಾಸ್ ರಮೇಶ್ ಸಂಶಯಾಸ್ಪದ ರೀತಿ ವರ್ತಿಸುತ್ತಿದ್ದ. ಪೊಲೀಸರಿಗೆ ಅನುಮಾನ ಬಂದು ಆತನನ್ನು ದಸ್ತಗಿರಿ ಮಾಡಿ ವಿಚಾರಿಸಿದಾಗ, ಹಲವಾರು ಕಡೆಗಳಲ್ಲಿ ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು.
ಸೆಲ್ವಕುಮಾರ್ ನಗರದ ಐದು ಕಡೆ ರಾತ್ರಿ ಹೊತ್ತು ಬೀಗ ಮುರಿದು ಕಳ್ಳತನ ಗೈದಿದ್ದ. ಮೂರು ಪ್ರಕರಣಗಳಲ್ಲಿ ಈತನಿಗೆ ಶಿಕ್ಷೆ ವಿಧಿಸಲಾಗಿದೆ. 2016ರ ಸೆಪ್ಟೆಂಬರ್ 14ರಂದು ರಾತ್ರಿ ಹೊತ್ತು ಕಂಕನಾಡಿ ವ್ಯಾಪ್ತಿಯ ರಾಶಿ ಕಲೆಕ್ಷನ್ ಅಂಡ್ ಸಿಲ್ಕ್ಸ್ ಎಂಬ ಬಟ್ಟೆ ಅಂಗಡಿಯ ಬೀಗ ಮುರಿದು 24 ಸಾವಿರ ರೂ. ಕಳವು ಮಾಡಿದ್ದ.
2016 ನವೆಂಬರ್ 29 ರಂದು ರಾತ್ರಿ ಕಂಕನಾಡಿ ತಾಜ್ ಸೈಕಲ್ ಶಾಪ್ನ ಒಂದನೇ ಮಹಡಿಯ ಕಿಟಕಿ ಸರಕುಗಳನ್ನು ಹ್ಯಾಕ್ಸೊ ಬ್ಲೇಡ್ನಿಂದ ಮುರಿದು 90,330 ರೂ. ಕಳವು ಹಾಗೂ 2017ರ ಮಾರ್ಚ್ 9ರಂದು ಕಂಕನಾಡಿಯ ಪಂಪ್ ವೆಲ್ ಬಳಿಯ ತೃಪ್ತಿ ಬಿಲ್ಡಿಂಗ್ನ ಅಸ್ಸಾದಿ ಕನ್ಸ್ಟ್ರಕ್ಷನ್ನ ಕಿಟಕಿ ಸರಳು ಮುರಿದು ಎರಡು ಮೊಬೈಲ್ ಕಳುವುಗೈದಿರುವ ಬಗ್ಗೆ ತನಿಖೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.