ಮಂಗಳೂರು:ಮಂಗಳೂರಿನ ಹೊರವಲಯದ ಗಂಜಿಮಠದ ಮಳಲಿ ಎಂಬಲ್ಲಿ ಮಸೀದಿಯ ನವೀಕರಣದ ವೇಳೆ ಪತ್ತೆಯಾದ ದೇಗುಲ ಶೈಲಿಯ ಕಟ್ಟಡದ ವಿಚಾರಕ್ಕೆ ಸಂಬಂಧಿಸಿದಂತೆ, ಮಸೀದಿ ಆಡಳಿತ ಸಮಿತಿಯೊಂದಿಗೆ ವಿಶ್ವಹಿಂದೂ ಪರಿಷತ್ ಮುಖಂಡರು, ಶಾಸಕರು ಸಭೆ ನಡೆಸಿದರು. ತಾಂಬೂಲ ಪ್ರಶ್ನೆ ಬಳಿಕ ವಿಶ್ವ ಹಿಂದೂ ಪರಿಷತ್ ಮುಖಂಡರು ಮತ್ತು ಶಾಸಕ ಭರತ್ ಶೆಟ್ಟಿ ಸಭೆ ನಡೆಸಿದ್ದಾರೆ.
ಮಸೀದಿಯಲ್ಲಿ ದೇಗುಲ ಶೈಲಿ ಪತ್ತೆಯಾದ ಬಳಿಕ ಇದರ ಕಾಮಗಾರಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಈ ಮಧ್ಯೆ ಹಿಂದೂ ಸಂಘಟನೆಗಳು ಮಳಲಿಯ ಶ್ರೀರಾಮಾಂಜನೆಯ ಭಜನಾ ಮಂದಿರದಲ್ಲಿ, ಹಿಂದೂಗಳ ಧಾರ್ಮಿಕ ನಂಬಿಕೆಯಲ್ಲೊಂದಾದ ಜ್ಯೋತಿಷ್ಯದ ಉನ್ನತ ಸ್ಥಾನದಲ್ಲಿರುವ ತಾಂಬೂಲ ಪ್ರಶ್ನೆಯನ್ನು ಇರಿಸಿದ್ದರು. ಈ ತಾಂಬೂಲ ಪ್ರಶ್ನೆಯಲ್ಲಿ ಮಸೀದಿಯು ಹಿಂದೆ ಗುರು ಮಠವಾಗಿದ್ದು, ಅಲ್ಲಿ ಶಿವನನ್ನು ಆರಾಧಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.