ಮಂಗಳೂರು :ರಾಜ್ಯದಲ್ಲಿರುವ ಸರ್ಕಾರ ಜನವಿರೋಧಿಯಾಗಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಆ ಪಕ್ಷದ ವಿರುದ್ಧವಾಗಿ ಮತ ನೀಡುತ್ತಾರೆಂಬ ವಿಶ್ವಾಸ ನಮಗಿದೆ ಎಂದು ಶಾಸಕ ಯು ಟಿ ಖಾದರ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯಾರೂ ಕೂಡ ಬಿಜೆಪಿಗೆ ಮತ ಹಾಕಲು ಹೋಗುವುದಿಲ್ಲ. ಮತ ಹಾಕುವವರು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಮತದಾರರಿಗೆ ಮನವಿ ಮಾಡಿದರು.
ಕಸ್ತೂರಿ ರಂಗನ್ ವರದಿ ಜಾರಿಗೆ ಬಂದ ಸಂದರ್ಭ ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಅದಕ್ಕೆ ತಿದ್ದುಪಡಿ ಮಾಡಬೇಕು ಎಂದು ಬಿಜೆಪಿ ಬಹಳಷ್ಟು ಹೋರಾಟ ಮಾಡಿತ್ತು. ಆದರೆ, ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ವಹಿಸಿದ ಬಳಿಕ ಅದನ್ನು ನಿಲ್ಲಿಸುವ ಪ್ರಯತ್ನ ಮಾಡಿಲ್ಲ. ಆದ್ದರಿಂದ ಜನಸಾಮಾನ್ಯರ ಪರ ನಿಲ್ಲದ ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿ ಈ ಚುನಾವಣೆ ಪರಿವರ್ತನೆ ಆಗಬೇಕು ಎಂದು ಖಾದರ್ ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪಡಿತರ ಚೀಟಿ ದೊರಕಿಲ್ಲ, ನಿವೇಶನ ಮಂಜೂರಾತಿಯಾಗಿಲ್ಲ. ಕಾಂಗ್ರೆಸ್ ಕಾಲದಲ್ಲಿ ಮಂಜೂರಾತಿಯಾದ ಮನೆಗೆ ಹಣ ಬಿಡುಗಡೆ ಇನ್ನೂ ಆಗಿಲ್ಲ. ಆಯುಷ್ಮಾನ್ ಕಾರ್ಡ್ ಯಾರಿಗೂ ಲಭ್ಯವಿಲ್ಲ, ಪಿಂಚಣಿ, ಸಂಧ್ಯಾಸುರಕ್ಷಾ ಹಣ ಬರುತ್ತಿಲ್ಲ. ರೈತ ವಿರೋಧಿ ಕಾನೂನುಗಳು ಜಾರಿಗೊಳಿಸಿರುವ ಹಿನ್ನೆಲೆ ರೈತರು ಬೀದಿಗಿಳಿದಿದ್ದಾರೆ.
ಇನ್ನು ಶಿಕ್ಷಕರಿಗೆ ವೇತನವಿಲ್ಲ, ಕೆಎಸ್ಆರ್ಟಿಸಿ ನೌಕರರು ಮುಷ್ಕರ ಮಾಡುತ್ತಿದ್ದಾರೆ. ಪೆಟ್ರೋಲ್-ಡೀಸೆಲ್ ದರ ಗಗನಕ್ಕೇರಿದೆ. ಆದ್ದರಿಂದ ಬಿಜೆಪಿ ಸರ್ಕಾರ ಬಂದ ಬಳಿಕ ಗ್ರಾಮ ಮಟ್ಟದ ಜನರಿಗೆ ಏನು ಮಾಡಿದ್ದಾರೆಂದು ಜನರು ಮತ ಅವರಿಗೆ ನೀಡುತ್ತಾರೆ ಎಂದು ಯು ಟಿ ಖಾದರ್ ಪ್ರಶ್ನಿಸಿದರು.