ಬೆಳ್ತಂಗಡಿ(ದಕ್ಷಿಣ ಕನ್ನಡ): ಧರ್ಮದ ಮರ್ಮವನ್ನರಿತು ನಮ್ಮನ್ನು ನಾವು ಶುದ್ಧೀಕರಿಸಿ ಜಾಗೃತಿಗಾಗಿ ಜಾಗರಣೆ ಮಾಡಬೇಕು. ಸಂಸಾರದ ಕಷ್ಟಗಳನ್ನು ಪಾರು ಮಾಡಲು ಧರ್ಮದ ಅನುಷ್ಠಾನದೊಂದಿಗೆ ದೇವರ ಅನುಗ್ರಹವೂ ಅಗತ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ನುಡಿದರು.
ಧರ್ಮಸ್ಥಳದಲ್ಲಿ ಶಿವರಾತ್ರಿ ಸಂದರ್ಭ ಶಿವಪಂಚಾಕ್ಷರಿ ಪಠಣದೊಂದಿಗೆ ಅಹೋರಾತ್ರಿ ಜಾಗರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ಅವರು ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಅವರು, ನಮ್ಮೆಲ್ಲರ ಸುಖ-ಶಾಂತಿ, ನೆಮ್ಮದಿಯೊಂದಿಗೆ ವಿಶ್ವಶಾಂತಿಗಾಗಿ ನಾವು ಪ್ರಾರ್ಥನೆ ಮಾಡಬೇಕಾದ ಅನಿವಾರ್ಯತೆ ಇದೆ. ಧರ್ಮದ ಬಗ್ಗೆ ತಿಳುವಳಿಕೆ ಇದ್ದು, ಆಚರಣೆ ಮಾಡಿದರೆ ಹೆಚ್ಚು ಫಲಪ್ರದವಾಗುತ್ತದೆ. ಸತ್ಯ, ಧರ್ಮ, ನ್ಯಾಯ ಮತ್ತು ನೀತಿಯ ಪಾಲನೆಯೊಂದಿಗೆ ಎಲ್ಲರೂ ಸಚ್ಚಾರಿತ್ರ್ಯದ ಸುಜ್ಞಾನಿ ಭಕ್ಷರಾಗಬೇಕು. ಹಿತ-ಮಿತ ಆಹಾರ ಸೇವನೆಯೊಂದಿಗೆ ಶಿಸ್ತು, ಸಂಯಮ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೆಗ್ಗಡೆಯವರು ಹೇಳಿದರು.
ಪಾದಯಾತ್ರಿಗಳು ಪರಿಸರ ಮಾಲಿನ್ಯ ಮಾಡಬಾರದು, ಶಿಸ್ತಿನೊಂದಿಗೆ ಪರಿಸರ ಸಂರಕ್ಷಣೆ ಮಾಡಿ ಸ್ವಚ್ಛತೆ ಕಾಪಾಡಬೇಕು. ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯಗಳನ್ನು ಅಲ್ಲಲ್ಲಿ ಬಿಸಾಡಿ ಇತರರಿಗೆ ತೊಂದರೆ ಉಂಟುಮಾಡಬಾರದು ಎಂದು ಕಿವಿಮಾತು ಹೇಳಿದರು.